
ಬೆಂಗಳೂರು: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸೆಸ್‌ನಿಂದ ಸಂಗ್ರಹವಾಗಿರುವ ಹಣವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದು, ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಕಾರ್ಮಿಕರ ಹಿತ ಕಾಯಬೇಕು ಎಂದು ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಆಗ್ರಹಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಕೆ.ಮಹಾಂತೇಶ್, 2006ರಲ್ಲಿ ಆರಂಭವಾದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ₹5650 ಕೋಟಿ ಸೆಸ್ ರೂಪದಲ್ಲಿ ಸಂಗ್ರಹವಾಗಿದೆ. ಆದರೂ ಇಲ್ಲಿಯವರೆಗೂ ಕಾರ್ಮಿಕರಿಗಾಗಿ ಸರ್ಕಾರ ಖರ್ಚು ಮಾಡಿರುವುದು ₹177 ಕೋಟಿ ಮಾತ್ರ. ಆದರೆ, ಈಗ ಕಾರ್ಮಿಕ ಸಚಿವರು ಮನಬಂದಂತೆ ಖರ್ಚು ಮಾಡಲು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ದೂರಿದರು.
ನೋಂದಾಯಿತ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಮದುವೆ, ಹೆರಿಗೆ ಮತ್ತಿ ತರ ಕಲ್ಯಾಣ ಸೌಲಭ್ಯಗಳಿಗೆ ಕತ್ತರಿ ಹಾಕಲು ಸಚಿವರು ನಿರ್ಧರಿಸಿದ್ದಾರೆ. ಹೀಗಾಗಿ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಕಾರ್ಮಿಕ ವಿರೋಧಿ ನೀತಿಗಳು ಜಾರಿ ಮಾಡುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಸಮಿತಿ ಸದಸ್ಯ ಶಿವಣ್ಣ ಮಾತನಾಡಿ, 11 ಲಕ್ಷ ಫಲಾನುಭವಿಗಳಿಗೆ ಸ್ಮಾರ್ಟ್ ಪೋನ್‌ಗಾಗಿ ₹264ಕೋಟಿ, ನೋಂದಣಿಯಾದ ಫಲಾನುಭವಿ ಹಾಗೂ ಅವರ ಮಕ್ಕಳ ಬಸ್‌ಪಾಸ್‌ಗೆ ₹3258 ಕೋಟಿ, ಏರ್ ಆ್ಯಂಬ್ಯುಲೆನ್ಸ್‌ಗೆ ₹21 ಕೋಟಿ, ಉದ್ಯೋಗಖಾತ್ರಿ ಕೆಲಸಗಾರರನ್ನು ನೋಂದಾಯಿಸಲು ಕಿಯೋನಿಕ್ಸ್ ಸಂಸ್ಥೆಗೆ ₹15 ಕೋಟಿಗಳಿಗೆ ಗುತ್ತಿಗೆ ಇನ್ನಿತರೆ ಕಾರ್ಯಕ್ರಮಗಳಿಗೆ ಕಾರ್ಮಿಕರ ಸೆಸ್ ಹಣ ಬಳಕೆ ಮಾಡಿಕೊಳ್ಳಲು ಸಚಿವರು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಿತಿ ಸದಸ್ಯರಾದ ಎಸ್. ಎಸ್.ಪ್ರಕಾಶ್, ಸಿ.ವಿ.ಲೋಕೇಶ್, ಎನ್.ವೀರಸ್ವಾಮಿ, ಕಾಳಪ್ಪ, ಬಿ.ದೇವರಾಜು, ಎಂ.ಜಿ.ರಂಗಸ್ವಾಮಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.