
ಜನಸಾಮಾನ್ಯರಿಗೆ ಅರ್ಥವಾಗದ ಒಂದು ಸುದ್ದಿ ಏನೆಂದರೆ ಇತ್ತೀಚೆಗೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ತಮ್ಮ ಅನುಮತಿ ಇಲ್ಲದೇ ತಮ್ಮ ಹಾಡುಗಳನ್ನು ಯಾರೂ ಹಾಡುವಂತಿಲ್ಲ ಎಂದು ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಅವರ ತಂಡಕ್ಕೆ ಕಳುಹಿಸಿದ ನೋಟೀಸು ವಿಚಾರ.
ಇದರ ಹಿಂದೆ ಬಹಳಷ್ಟು ಗಂಭೀರ ವಿವರಗಳು ಇವೆ. ಮೊದಲನೆಯದಾಗಿ ಸಂಗೀತ ನಿರ್ದೇಶಕರಿಗೆ ಹೀಗೆ ಹೇಳುವ ಅಧಿಕಾರ ಇದೆಯೇ ಎಂಬುದು. ಆಗ ಅದರ ಹಿಂದೆ ಸಂಗೀತ ನಿರ್ದೇಶಕರ ಹಕ್ಕು, ಚಿತ್ರಸಾಹಿತಿಗಳ ಹಕ್ಕಿನ ವಿಚಾರ ಬರುತ್ತದೆ.
ಕಾದಂಬರಿ ಅಥವಾ ಲೇಖನ ಓದುವ ಹವ್ಯಾಸ ಇರುವವರಿಗೆ ಗೊತ್ತು, ‘ಈ ಕಾದಂಬರಿಯ ಸಂಪೂರ್ಣ ಹಕ್ಕು ಲೇಖಕರದ್ದು' ಎಂದು ಎಲ್ಲಾ ಗ್ರಂಥಗಳ ಸೂಚಿಯಲ್ಲಿ ಬರೆದಿರುತ್ತದೆ. ಈ ಹಕ್ಕು ಹಕ್ಕು ಕಟ್ಕೊಂಡ್ ಏನಾಗ್ಬೇಕು ಎಂಬ ಪ್ರಶ್ನೆಗೆ ಸಿಗುವ ಉತ್ತರ- ಈ ಕತೆ, ಲೇಖನ, ಗ್ರಂಥ- ಇವುಗಳು ಮಾರಾಟವಾದಷ್ಟೂ ಬುಕ್ ಪಬ್ಲಿಷರ್‌ಗೆ ಬರುವ ಆದಾಯದಲ್ಲಿ ಆಯಾ ಲೇಖಕರಿಗೂ ಗೌರವ ಧನ ಹೆಸರಲ್ಲಿ ಒಂದಷ್ಟುಹಣ ಸೇರುತ್ತದೆ. ಇದು ಸುಮಾರು ನೂರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಈ ಗೌರವಧನ ಎನ್ನುವುದು ಆಯಾ ಕೃತಿಗೆ ಅದರ ಕೃತಿಕಾರನಿಗೆ ಅಥವಾ ಕ್ರಿಯಾಶೀಲ ವ್ಯಕ್ತಿಗೆ, ಲೇಖಕನಿಗೆ ಕೃತಜ್ಞತೆ ಮತ್ತು ಗೌರವ ಸೂಚಿಸಿ ನೀಡುವ ಕಾಣಿಕೆ. ಕಾಪಿರೈಟ್ ಕಾಯಿದೆ ಪ್ರಕಾರ ‘ರಾಯಲ್ಟಿ'.
ಈ ರಾಯಲ್ಟಿ ಅಥವಾ ಗೌರವಧನ ಮಂದೆ ಸಿನಿಮಾ ಸಂಗೀತ ಮತ್ತು ಸಾಹಿತ್ಯಕೂ ಅನುಷ್ಟಾನಕ್ಕೆ ಬಂತು. ಸಂಗೀತ ನಿರ್ದೇಶಕರಿಗೆ ಮತ್ತು ಸಿನಿಮಾ ಸಾಹಿತಿಗಳಿಗೆ ರಾಯಲ್ಟಿಸಿಗುವಂಥ ಕಾನೂನು ಬಂತು. ಆದರೆ ಕೊಡುವವರು ಯಾರು? ಎಲ್ಲಿಂದ ಪಡೆಯೋದು? ಈ ಪ್ರಶ್ನೆ ಬಂದಾಗ ಅವರಿಗೆ ಸಹಾಯ ನೀಡಲು ಐಪಿಆರ್‌ಎಸ್ ಎಂಬ ಸಂಸ್ಥೆ ಹುಟ್ಟಿಕೊಂಡಿತು. ಇಂಡಿಯನ್ ಪರ್ಫಾರ್ಮಿಂಗ್ ರೈಟ್ಸ್ ಸೊಸೈಟಿ ಇದರ ಪೂರ್ಣರೂಪ.
ಸಂಗೀತ ನಿರ್ದೇಶಕರಿಗೂ ಗೀತ ರಚನಾಕಾರರಿಗೂ ಎಲ್ಲೆಲ್ಲಿಂದ ಗೌರವಧನ ಬರಬೇಕೆಂದು ಈ ಸಂಸ್ಥೆ ತೀರ್ಮಾನಿಸಿತು. ಹಾಡು ಅಥವಾ ಸಂಗೀತವನ್ನು ಯಾರ್ಯಾರು ಬಳಸಿಕೊಳ್ಳುತ್ತಾರೋ ಅವರಿಂದ ಮೂಲ ಕಲಾವಿದರಿಗೆ ರಾಯಲ್ಟಿಬರಬೇಕು ಎಂದು ತೀರ್ಮಾನವಾದಾಗ ಆ ಪಟ್ಟಿಯಲ್ಲಿ ರೇಡಿಯೋ, ಸಾರ್ವಜನಿಕ ಆರ್ಕೆಸ್ಟ್ರಾ ಇವರೆಲ್ಲಾ ಗೌರವಧನ ಸಲ್ಲಿಸಬೇಕು ಎಂದಾಯಿತು. ಕ್ರಮೇಣ ಈ ಪಟ್ಟಿಗೆ ಟಿವಿ, ದೊಡ್ಡ ದೊಡ್ಡ ಹೊಟೇಲ್, ಮೊಬೈಲ್- ಇವೆಲ್ಲಾ ಸೇರ್ಪಡೆಯಾಯ್ತು. ಹನಿಗೂಡಿ ಸಾಗರ ಎಂಬಂತೆ ಇವರೆಲ್ಲಾ ಕೊಡುವ ಕಾಣಿಕೆ ಸಂಗ್ರಹವಾದಾಗ ಸಂಗೀತ ನಿರ್ದೇಶಕರಿಗೂ, ಸಾಹಿತಿಗಳಿಗೂ ಜೀವನಕ್ಕೆ ಬೇಕಾದಷ್ಟು ಸಹಾಯವಾಯಿತು.
ಇದರ ಜವಾಬ್ದಾರಿಯನ್ನು ಐಪಿಆರ್‌ಎಸ್ ಹೊತ್ತಿದೆ. ಇಲ್ಲಿ ಇನ್ನೊಂದು ವಿಷಯ ಏನೆಂದರೆ ಈ ರಾಯಲ್ಟಿಸಂಗೀತ ನಿರ್ದೇಶಕರಿಗೆ ಮತ್ತು ಸಾಹಿತಿಗಳಿಗೆ ಅಷ್ಟೇ ಅಲ್ಲ, ಇವರ ಹಾಡುಗಳನ್ನು ಮಾರಾಟ ಮಾಡುವ ಕ್ಯಾಸೆಟ್ ಕಂಪನಿಗಳಿಗೂ ಹೋಗುತ್ತದೆ. ಯಾಕೆಂದರೆ ಅವರು ಸಿನಿಮಾ ನಿರ್ಮಾಪಕರಿಂದ ಹಣ ಕೊಟ್ಟು ಹಕ್ಕನ್ನು ಬರೆಸಿಕೊಂಡಿರುತ್ತಾರೆ. ಹಿಂದಿನ ಕಾನೂನಿನಂತೆ 45 ಶೇ.ದಷ್ಟು ಕ್ಯಾಸೆಟ್ ಕಂಪನಿಗಳಿಗೆ, ಉಳಿದ ಹಣ ಸಂಗೀತ ನಿರ್ದೇಶಕರಿಗೆ ಮತ್ತು ಸಾಹಿತಿಗಳಿಗೆ ಹಂಚಬೇಕಿತ್ತು.
ಆದರೆ ಹಿಂದಿ ಚಲನಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ಕಾನೂನು ರೀತ್ಯಾ ಹೋರಾಡಿ, ಅದನ್ನು ಸಮನಾಗಿ ಸಿಗುವ ಹಾಗೆ ಮಾಡಿದರು. ಉಳಿದ 10 ಶೇ. ಮೊತ್ತ ಐಪಿಆರ್‌ಎಸ್ ಸೇವೆಗಾಗಿ ಸಲ್ಲುತ್ತದೆ.
ಕೆಲವು ಸಲ ಕೇವಲ ನಿರ್ಮಾಪಕ ಮಾತ್ರ ಆಡಿಯೋ ಕಂಪನಿಗಳಿಗೆ ಹಕ್ಕು ಬರಕೊಟ್ಟಿರುತ್ತಾನೆ. ಆದರೆ ಸಂಗೀತ ನಿರ್ದೇಶಕ, ಸಾಹಿತಿ ಬರಕೊಟ್ಟಿಲ್ಲವೆಂದಾದರೆ ಅವರ ಹಕ್ಕುಸ್ವಾಮ್ಯ ಅವರಲ್ಲೇ ಇದೆ ಎಂದು ಅರ್ಥ. ಐಪಿಆರ್‌ಎಸ್ ಅಧಿಕಾರ ಭಾರತಕ್ಕೆ ಮಾತ್ರ ಸೀಮಿತ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಭಾರತದಲ್ಲೇ ಎಲ್ಲಾದರೂ ಆಕ್ರೆಸ್ಟ್ರಾ ನಡೆಸಿದ್ದರೆ ಇಳಯರಾಜಾ ಅವರು ಕೇಳುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಬರಬೇಕಾದ ಗೌರವಧನ ಐಪಿಆರ್‌ಎಸ್ ಪಡೆದು ತಲುಪಿಸುತ್ತದೆ. ಆದರೆ ಇಲ್ಲಿ ನಡೆದದ್ದು ಹಾಗಲ್ಲ. ಎಸ್‌ಪಿಬಿ ಅವರ ಆರ್ಕೆಸ್ಟ್ರಾ ಯುರೋಪ್, ಅಮೆರಿಕಾದಲ್ಲಿ ಆದುದರಿಂದ ವಿದೇಶದಲ್ಲಿ ಬೇರೆ ರೀತಿಯ ಕಾನೂನು ಇರುವುದರಿಂದ ಐಪಿಆರ್‌ಎಸ್ ಹಸ್ತಕ್ಷೇಪ ಮಾಡಲಿಲ್ಲ. ಹೀಗಾಗಿ ಇಳಯರಾಜಾ ಅವರು ಸ್ವತಃ ನೋಟೀಸು ನೀಡಿದರು.
ಇನ್ನು ಐಪಿಆರ್‌ಎಸ್ ಸಂಸ್ಥೆ ಪ್ರತಿ ಒಂದೊಂದು ಹಾಡಿಗೂ ರಾಯಲ್ಟಿಸಂಗ್ರಹಿಸುವುದು- ಅದೂ ದೇಶದ ಮೂಲೆ ಮೂಲೆಗಳಿಂದ- ಎಂಬುದು ಆಗದ ಮಾತು. ಹಾಗಾಗಿ ಆಕಾಶವಾಣಿ ಎಫ್‌ಎಂ ರೇಡಿಯೋ, ಮೊಬೈಲ್ ರಿಂಗ್ ಟೋನ್, ಇಂಟರ್ನೆಟ್, ಪಬ್ಲಿಕ್ ಆರ್ಕೆಸ್ಟ್ರಾ ಇವರುಗಳಿಂದ ಒಂದು ಸಮಗ್ರ ಮೊತ್ತ ಸಂಗ್ರಹಿಸಿ ಹಂಚುತ್ತದೆ. ಇದು ದೊಡ್ಡ ಕೆಲಸ. ಕಲಾವಿದ ನಿಧನರಾದರೆ ಅಲ್ಲಿಂದ 70 ವರ್ಷದವರೆಗೂ ಅವರ ಕುಟುಂಬ ವರ್ಗ ದಾಖಲೆ ನೀಡಿ ಆ ಗೌರವಧನ ಪಡೆಯಬಹುದು. ದೇಶಾದ್ಯಂತ ಹೆಚ್ಚಿನ ಸಂಗೀತ ನಿರ್ದೇಶಕರು, ಸಾಹಿತಿಗಳು ಐಪಿಆರ್‌ಎಸ್ ಸದಸ್ಯರಾಗಿದ್ದಾರೆ. ಪ್ರತಿ ವರ್ಷ ಐಪಿಆರ್‌ಎಸ್ ನೀಡುವ ರಾಯಲ್ಟಿ ಪಡೆಯುತ್ತಾರೆ. ಕಲಾವಿದ ತಾನು ಎಲ್ಲಾ ಕಡೆ ಹೋಗಿ ಗೌರವಧನ ಸಂಗ್ರಹಿಸಲು ಸಾಧ್ಯವಿಲ್ಲ. ಹಾಗಾಗಿ ಸಾಹಿತಿಗಳಿಗೆ, ಸಂಗೀತ ನಿರ್ದೇಶಕರಿಗೆ ಐಪಿಆರ್‌ಎಸ್ ಸಹಾಯ ಮಾಡುತ್ತದೆ.
ಕೆಲವು ಆಡಿಯೋ ಕಂಪನಿಗಳು ರೇಡಿಯೋ ಟಿವಿ, ಮೊಬೈಲ್, ಯೂಟ್ಯೂಬ್ ಇತ್ಯಾದಿ ಮಾಧ್ಯಮಗಳಿಂದ ತಾವೇ ರಾಯಲ್ಟಿವಸೂಲಿ ಮಾಡಿಕೊಳ್ಳುತ್ತವೆ. ಆದರೆ ಅವರು ಸಂಗೀತ ನಿರ್ದೇಶಕರಿಗೆ, ಸಾಹಿತಿಗಳಿಗೆ ಅದರ ಕಿಂಚಿತ್ತನ್ನೂ ಕೊಡುವುದಿಲ್ಲ.ಯಾಕೆಂದರೆ ಅವರ ವಾದ ಏನೆಂದರೆ ಸಾಹಿತಿಗಳು, ಸಂಗೀತ ನಿರ್ದೇಶಕರು ನಿರ್ಮಾಪಕರಿಂದ ಸಂಭಾವನೆಯನ್ನು ಮೊದಲೇ ಪಡೆದಿದ್ದಾರಲ್ಲಾ ಎಂದು. ಸಂಭಾವನೆಗೂ ಗೌರವಧನಕ್ಕೂ ಇರುವ ವ್ಯತ್ಯಾಸ ಗೊತ್ತಿದ್ದರೆ ಈ ವಾದ ಉದ್ಭವಿಸುವುದಿಲ್ಲ.
<ಈ ರಾಯಲ್ಟಿವಿಚಾರ ಕೆದಕುತ್ತಾ ಹೋದಷ್ಟೂಜಟಿಲ, ಕುಟಿಲ, ಗೊಂದಲಗಳೇ ಜಾಸ್ತಿ!
- ವಿ.ಮನೋಹರ್, ಸಂಗೀತ ನಿರ್ದೇಶಕರು
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.