
ಬೆಂಗಳೂರು(ಮಾ.26): ಸುವರ್ಣ ನ್ಯೂಸ್ ವಾಹಿನಿಯಲ್ಲಿ ಪ್ರತಿ ವಾರ ನೇರ ಪ್ರಸಾರವಾಗುತ್ತಿರುವ ವಿವಿಧ ಇಲಾಖೆಯ ಸಚಿವರುಗಳ ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸ್ಟುಡಿಯೋದಲ್ಲಿ ತಮ್ಮ ಅಧೀನ ಅಧಿಕಾರಿಗಳೊಂದಿಗೆ ಕುಳಿತು ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುತ್ತಿರುವ ಮಂತ್ರಿಗಳಿಗೆ ನಾಗರಿಕರು ಸಹ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇಂದು ನಮ್ಮ ಸ್ಟುಡಿಯೋದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ಹಾಜರಾಗಿ ದೂರವಾಣಿ ಹಾಗೂ ಫೇಸ್'ಬುಕ್ ಕಮೆಂಟ್'ಗಳ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು.
ಈ ಸಂದರ್ಭದಲ್ಲಿ ವಾಹಿನಿಯು ದಾವಣಗೆರೆಯ ಭಾರತ್ ಕಾಲೋನಿ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿದ್ದ ರೇಷನ್ ಮಾಫಿಯಾದ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಈ ಅಂಗಡಿ ಮಾಲೀಕ ಬಡವರ ಪಡಿತರ ಚೀಟಿಗಳನ್ನು ಇಟ್ಟುಕೊಂಡು ಸಾಲ ಕೊಡುವ ವ್ಯವಹಾರ ಮಾಡುತ್ತಿದ್ದ.
ಇದನ್ನು ಗಮನಿಸಿದ ಸಚಿವ ಯು.ಟಿ. ಖಾದರ್ ಅವರು ಮಾಲೀಕ ವೆಂಕಟೇಶ್ ನಾಯಕ್'ಗೆ ಇನ್ನು ಮುಂದೆ ಈ ರೀತಿ ಮಾಡಿದರೆ ಕ್ರಮ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ವರದಿ ಬಳಿಕ ಎಚ್ಚೆತ್ತುಕೊಂಡ ಆಹಾರ ಇಲಾಖೆ ಅಧಿಕಾರಿಗಳು ಮಾಲೀಕನ ವಿರುದ್ಧ ಆರ್'ಎಂಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 34ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.