ರೈತರಿಗೆ ವಾರದ ಒಳಗೆ ಪರಿಹಾರ : ಸಿಎಂ ಕುಮಾರಸ್ವಾಮಿ

By Web DeskFirst Published Jul 25, 2018, 9:40 AM IST
Highlights

ರೈತರಿಗೆ ವಾರದ ಒಳಗಾಗಿ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ವಿದ್ಯುತ್ ಮಾರ್ಗದ ಸಂಬಂಧ ಟವರ್ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ಒಂದು ವಾರದೊಳಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. 

ಬೆಂಗಳೂರು:  ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕೇಂದ್ರ ಪವರ್ ಗ್ರೀಡ್‌ನಿಂದ ಹಾದು ಹೋಗುವ ವಿದ್ಯುತ್ ಮಾರ್ಗದ ಸಂಬಂಧ ಟವರ್ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ಒಂದು ವಾರದೊಳಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. 

ವಿಧಾನಸೌಧದಲ್ಲಿ ಮಂಗಳವಾರ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಜೊತೆ ಚರ್ಚಿಸಿದ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ಈ ಭರವಸೆ ನೀಡಿದ್ದಾರೆ. ಚರ್ಚೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕೋಡಿಹಳ್ಳಿ ಚಂದ್ರಶೇಖರ್, ಸುಮಾರು 750 ಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್‌ನಲ್ಲಿ ಟವರ್ ಅಳವಡಿಸಲಾಗುತ್ತಿದೆ.

ರೈತರು ತಮ್ಮ ಜಮೀನಿಗೆ ಹೋಗದಂತೆ ನಾಕಾ ಬಂದಿ ಹಾಕಲಾಗಿದೆ. ಜತೆಗೆ ರೈತರಿಗೆ ಪರಿಹಾರ ನೀಡುವಲ್ಲಿ ಕಂಪನಿ ತಾರತಮ್ಯ ಮಾಡಿದೆ. ನಗರ ಪ್ರದೇಶಕ್ಕೆ ಸಮೀಪ ಇರುವ ಭೂಮಿ, ಹೆದ್ದಾರಿ ಹತ್ತಿರ ಇರುವ ಭೂಮಿಗೆ ಹೆಚ್ಚು ಬೆಲೆ ಇದೆ. ಆದರೆ, ತಾವು 2004 ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಮಾರ್ಗಸೂಚಿಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ಸಹ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಾತುಕತೆಗೆ ರೈತರನ್ನು ಆಹ್ವಾನಿಸಿದ್ದರು. 

ಮಾತುಕತೆ ವೇಳೆ ಮುಖ್ಯಮಂತ್ರಿಗಳು ಕೇಂದ್ರ ಪವರ್ ಗ್ರೀಡ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತೇನೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಸಂಜೆ ತನಕ ಕಾದ ರೈತರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ನೂರಕ್ಕೂ ಹೆಚ್ಚು ರೈತರು ಆಗಮಿಸಿದ್ದರು. ಆದರೆ ಬೆಳಗಿನಿಂದ ಮುಖ್ಯಮಂತ್ರಿಗಳು ನಿರಂತರವಾಗಿ ಬೇರೆ ಬೇರೆ ಸಭೆ ನಡೆಸಿದ್ದರಿಂದ ಭೇಟಿ ಸಾಧ್ಯವಾಗಲೇ ಇಲ್ಲ. ಬೆಳಗ್ಗೆ 10  ಗಂಟೆಗೆ ಮಾತುಕತೆಗೆ ಆಹ್ವಾನಿಸಿದ್ದರೂ ಸಂಜೆ 4 ಗಂಟೆ ಯಾದರೂ ಭೇಟಿ ಆಗಲಿಲ್ಲ, ಹೀಗಾಗಿ ೩ನೇ ಮಹಡಿ ಯಲ್ಲಿ ಕುಳಿತು ಕೊಂಡರು. ಅನ್ನ ಕೊಡುವ ನಮಗೆ ನೀರು ಸಹ ಇಲ್ಲಿ ಸಿಗಲ್ಲ ಎಂದು ಬೇಸರಿಸಿಕೊಂಡರು.

click me!