ನರೇಂದ್ರ ಮೋದಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ಉಚಿತ ಸೈಕಲ್ !

By Web DeskFirst Published Jul 25, 2018, 9:17 AM IST
Highlights
  • ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ’ ಎಂದು ಹೇಳಲಾದ ಸುಳ್ಳು ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
  • ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ರುಜುವಾತಾಗಿದೆ

ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಮತ್ತು ಶಾಲಾ ಬ್ಯಾಗ್ ನೀಡುತ್ತಿದೆ ಎಂಬ ಸುಳ್ಳು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದೀಗ ಅಂತದ್ದೇ ಮತ್ತೊಂದು ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಆ ಸಂದೇಶವೇನೆಂದರೆ, ‘ಮುಂದಿನ  ಅಗಸ್ಟ್ 15ರ ಸ್ವತಂತ್ರ್ಯ ದಿನಾಚರಣೆಯಂದು ‘ಭಾರತ ಸರ್ಕಾರ ಉಚಿತ ಸೈಕಲ್ ವಿತರಣೆ-2018’ ಯೋಜನೆಯಡಿ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ನೀಡುತ್ತಿದೆ. ಉಚಿತ ಸೈಕಲ್ ಬಯಸುವವರು ಈ ಕೆಳಕಂಡ ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ’ ಎಂದು ಹೇಳಲಾಗಿದೆ. ಸದ್ಯ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನರೇಂದ್ರ ಮೋದಿ ಚಿತ್ರವಿರುವ ಪೇಜ್ ತೆರೆದುಕೊಳ್ಳುತ್ತದೆ. 

ಅದರಲ್ಲಿ ವಿದ್ಯಾರ್ಥಿಯ ಹೆಸರು, ಪೋಷಕರ ಹೆಸರು, ಶಾಲೆಯ ಹೆಸರು ಮತ್ತು ಅವರ ಸಂಪೂರ್ಣ ವಿಳಾಸವನ್ನು ಭರ್ತಿ ಮಾಡುವಂತೆ ಹೇಳಲಾಗುತ್ತದೆ. ಇದರೊಂದಿಗೆ ಕೆಲ ನಿಬಂಧನೆಗಳಿರುವುದಾಗಿಯೂ ಪೇಜ್‌ನಲ್ಲಿ ಹೇಳಲಾಗಿದೆ. ಆದರೆ ನಿಜಕ್ಕೂ ಮೋದಿ ಸರ್ಕಾರ ‘ಭಾರತ ಸರ್ಕಾರ-ಉಚಿತ ಸೈಕಲ್ ವಿತರಣೆ-2018’ ಯೋಜನೆಯಡಿ ಸೈಕಲ್ ವಿತರಿಸುತ್ತಿದೆಯೇ ಎಂದು ‘ಬೂಮ್‌ಲೈವ್’ ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ರುಜುವಾತಾಗಿದೆ.

ಭಾರತ ಸರ್ಕಾರವಾಗಲೀ ಅಥವಾ ಯಾವುದೇ ರಾಜಕೀಯ ಪಕ್ಷಗಳಾಗಲಿ ಉಚಿತ ಸೈಕಲ್ ನೀಡುವ ಯೋಜನೆ ಯನ್ನು ಘೋಷಿಸಿಲ್ಲ. ಈ ರೀತಿ ಸಂದೇಶದ ಕೆಳಗೆ ನೀಡಲಾಗಿರುವ ವೆಬ್‌ಸೈಟ್ ವಾಸ್ತವವಾಗಿ ಭಾರತ ಸರ್ಕಾರದ ಅಧಿಕೃತ ವೆಬ್ ಸೈಟ್ ಅಲ್ಲ. ಅದೊಂದು ನಕಲಿ ವೆಬ್‌ಸೈಟ್.

[ವೈರಲ್ ಚೆಕ್ ]

click me!