ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ : 5 ನಿಮಿಷದಲ್ಲೇ ಟಿಕೆಟ್‌

By Web DeskFirst Published Jun 30, 2019, 10:56 AM IST
Highlights

ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್ . ಇನ್ಮುಂದೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಗಾಗಿ ಕಾಯುವ ಅವಶ್ಯಕತೆ ಇಲ್ಲ. 

ಬೆಂಗಳೂರು[ಜೂ.30] :  ರೈಲು ಪ್ರಯಾಣಿಕರು ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವುದು ಮತ್ತು ಎಲ್ಲ ರೈಲುಗಳು ಕಡ್ಡಾಯವಾಗಿ ಸಮಯ ಪಾಲನೆ ಮಾಡುವ ಸಂಬಂಧ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್‌ ಅಂಗಡಿ ತಿಳಿಸಿದ್ದಾರೆ. ಪ್ರಯಾಣಿಕರಿಗೆ ಐದು ನಿಮಿಷದಲ್ಲಿ ಟಿಕೆಟ್ ವಿತರಣೆ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದಾಗೆ ಹೇಳಿದ್ದಾರೆ.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ಮಧ್ಯ ಪ್ರಯಾಣಿಕರು ಸಂಚರಿಸಲು ನಿರ್ಮಿಸಿರುವ ಮೂರನೇ ದ್ವಾರ ಉದ್ಘಾಟಿಸಿ ಮಾತನಾಡಿದರು.

ಪಿಯೂಷ್‌ ಗೋಯಲ್‌ ಮತ್ತು ತಾವು ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ 100 ದಿನದ ಗುರಿ ನಿಗದಿಪಡಿಸಿಕೊಂಡಿದ್ದು, ಪ್ರಮುಖವಾಗಿ ರೈಲ್ವೆ ಸುರಕ್ಷತೆಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಒಂದು ತಿಂಗಳಲ್ಲಿ ಕ್ರಮ:

ರೈಲ್ವೆ ಸೇತುವೆಗಳ ಕೆಳ ಭಾಗದಲ್ಲಿ ತ್ಯಾಜ್ಯ ನೀರು ಸೋರಿಕೆ ಸಮಸ್ಯೆಯನ್ನು ಒಂದು ತಿಂಗಳಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದರು. ಬೆಂಗಳೂರು ನಗರಕ್ಕೆ ಸಬ್‌ ಅರ್ಬನ್‌ ರೈಲು ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಸಂಸತ್‌ ಅಧಿವೇಶನ ಮುಗಿದ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಸಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಮಾತನಾಡಿ, ಪ್ರತಿ ದಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಎರಡು ಲಕ್ಷ ಜನ ಸಂಚಾರ ಮಾಡುತ್ತಿದ್ದಾರೆ. ಪ್ರಯಾಣಿಕರ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಸದ ಪಿ.ಸಿ.ಮೋಹನ್‌, ಬಿಬಿಎಂಪಿ ಸದಸ್ಯರಾದ ಶಶಿಕಲಾ, ಶಿವಪ್ರಕಾಶ್‌, ನೈಋುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌, ವಿಭಾಗೀಯ ವ್ಯವಸ್ಥಾಪಕ ಗೋಪಿನಾಥ್‌ ಮಲ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ಮಧ್ಯ ಪ್ರಯಾಣಿಕರು ಸಂಚರಿಸಲು ನಿರ್ಮಿಸಿರುವ ಮೂರನೇ ದ್ವಾರವನ್ನು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್‌ ಅಂಗಡಿ ಉದ್ಘಾಟಿಸಿದರು. ಮೇಯರ್‌ ಗಂಗಾಂಬಿಕೆ, ಸಂಸದ ಪಿ.ಸಿ.ಮೋಹನ್‌ ಇತರರಿದ್ದರು.

1.65 ಕೋಟಿ ವೆಚ್ಚದಲ್ಲಿ ದ್ವಾರ ನಿರ್ಮಾಣ

ರೈಲ್ವೆ ನಿಲ್ದಾಣದ 1ನೇ ಫ್ಲಾಟ್‌ ಫಾರಂನಲ್ಲಿ ಸುಮಾರು 1.65 ಕೋಟಿ ರು. ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಮೂರನೇ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಕೆಂಪೇಗೌಡ ಮೆಟ್ರೋ ನಿಲ್ದಾಣದ ಸಮೀಪದಲ್ಲಿ ನಿರ್ಮಿಸಿರುವ ಈ ದ್ವಾರದಲ್ಲಿ 4 ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ಗಳು ವಿಶ್ರಾಂತಿ ಕೊಠಡಿ, 22 ಕಾರುಗಳು ಹಾಗೂ 100 ದ್ವಿ ಚಕ್ರವಾಹನಗಳ ನಿಲ್ದಾಣಕ್ಕೆ ವ್ಯವಸ್ಥೆ. ಮಳೆ ನೀರು ಕಾಲುವೆ ಹಾಗೂ ಹೂದೋಟ ನಿರ್ಮಾಣ ಮಾಡಲಾಗಿದೆ.

click me!