ಶೀಘ್ರದಲ್ಲೇ ಬೆಂಗಳೂರಲ್ಲಿ ಹಳೆ ಲಾರಿ ಓಡಾಟಕ್ಕೆನಿಷೇಧ ?

By Suvarna Web DeskFirst Published Mar 25, 2017, 6:24 PM IST
Highlights

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನೂತನ ಸೈಬರ್ ಕ್ರೈಂ ಠಾಣೆ ಉದ್ಘಾಟಿಸಿದ ಬಳಿಕ ಮಾತನಾಡಿದ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಹಳೆಯ ವಾಹನಗಳ ಪ್ರವೇಶ ನಿಷೇಸುವ ವಿಚಾರವನ್ನು ಬಹಿರಂಗಪಡಿಸಿದರು.

ಬೆಂಗಳೂರು(ಮಾ.25): ರಾಜಧಾನಿಯ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿರುವ ಬೆಂಗಳೂರು ನಗರ ಪೊಲೀಸರು, ಈಗ ಮತ್ತೆ ನಗರದಲ್ಲಿ ಹಳೆಯ ಸರಕು ಮತ್ತು ವಾಣಿಜ್ಯ ಸಾರಿಗೆ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನೂತನ ಸೈಬರ್ ಕ್ರೈಂ ಠಾಣೆ ಉದ್ಘಾಟಿಸಿದ ಬಳಿಕ ಮಾತನಾಡಿದ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಹಳೆಯ ವಾಹನಗಳ ಪ್ರವೇಶ ನಿಷೇಸುವ ವಿಚಾರವನ್ನು ಬಹಿರಂಗಪಡಿಸಿದರು.

ಬೆಂಗಳೂರು ನಗರ ವ್ಯಾಪ್ತಿಯೊಳಗೆ 15ರಿಂದ 20 ವರ್ಷಗಳ ಹಳೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಸಂಬಂಧ ಶೀಘ್ರವೇ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯ ಹಾಗೂ ಸಂಚಾರ ದಟ್ಟಣೆ ತಡೆಗೆ ಹಳೆ ವಾಹನಗಳ ಸಂಚಾರ ನಿರ್ಬಂಧ ಅನಿವಾರ್ಯವಾಗಿದೆ. ಈ ವಿಷಯದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಕೂಡ ಸಮಾಲೋಚಿಸಲಾಗುವುದು. ಮೂರು ವರ್ಷಗಳ ಹಿಂದೆ ಸಹ ಹಳೆ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಆ ವೇಳೆ ಜಾರಿಗೆ ಬಾರದ ಕಾರಣ ಅದೇ ಪ್ರಸ್ತಾವನೆಯನ್ನೇ ಮತ್ತೊಮ್ಮೆ ಸಾರಿಗೆ ಇಲಾಖೆಗೆ ಸಲ್ಲಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

2012ರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹಳೆಯ ಸರಕು ಸಾಗಣೆ ವಾಹನಗಳ ಪ್ರವೇಶ ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದರು. ಆದರೆ ಆಗ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘದ ತೀವ್ರ ವಿರೋಧದ ಬಳಿಕ ಸರ್ಕಾರ ಮಧ್ಯೆ ಪ್ರವೇಶಿಸಿ ಪೊಲೀಸರ ಆದೇಶವನ್ನು ಹಿಂಪಡೆಯಿತು. ಈಗ ಮತ್ತೆ ಹಳೆ ವಾಹನಗಳ ನಿರ್ಬಂಧ ವಿಚಾರ ಚರ್ಚೆಗೆ ಬಂದಿದ್ದು, ಇದೇ 30ನೇ ತಾರೀಖು ಲಾರಿ ಮಾಲೀಕರ ಸಂಘ ನಡೆಸಲಿರುವ ಬಂದ್‌ಗೆ ಸಂಚಾರ ನಿರ್ಬಂಧ ವಿಷಯವು ಮತ್ತಷ್ಟು ಕಾವೇರಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ.

(ಕನ್ನಡಪ್ರಭ ವಾರ್ತೆ)

click me!