ಮೋದಿ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ ದಿನೇಶ್ ಗುಂಡೂರಾವ್

By Web DeskFirst Published Dec 17, 2018, 8:16 AM IST
Highlights

ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಗೋವಾದಲ್ಲಿ ಕರ್ನಾಟಕ ಮೀನಿಗೆ ನಿಷೇಧ ಹೇರಿರುವ ಸಂಬಂಧ ಅವರು ಶೀಘ್ರದಲ್ಲೇ ಪ್ರಧಾನಿ ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. 

ಬೆಂಗಳೂರು :  ಕರ್ನಾಟಕದ ಮೀನು ಖರೀದಿಗೆ ಗೋವಾ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒತ್ತಾಯಿಸಿದರು.

ಕ್ವೀನ್ಸ್‌ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷ ಲಿಂಗರಾಜು ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಮೀನು ಖರೀದಿಗೆ ನಿಷೇಧ ವಿಧಿಸಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ. ಈ ಸಂಬಂಧ ಗೋವಾ ಸರ್ಕಾರ ಮತ್ತು ಗೋವಾ ಕಾಂಗ್ರೆಸ್‌ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಸದ್ಯದಲ್ಲಿಯೇ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಾಗುವುದು ಎಂದರು.

ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮೀನುಗಾರ ಸಮುದಾಯವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ಕರಾವಳಿ ಪ್ರದೇಶದಲ್ಲಿ ಮೀನುಗಾರರನ್ನು ಬಲವರ್ಧನೆಗೊಳಿಸುವುದು ಪಕ್ಷದ ಮುಖ್ಯ ಉದ್ದೇಶವಾಗಿದೆ. ಮೀನುಗಾರರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದರೊಂದಿಗೆ ಅವರ ಜೀವನ ಸುಧಾರಣೆಗಾಗಿ ನೂತನ ಕಾಂಗ್ರೆಸ್‌ ಮೀನುಗಾರ ವಿಭಾಗ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷ ಲಿಂಗರಾಜು ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಮೀನುಗಾರ ವಿಭಾಗದ ಜಿಲ್ಲಾ ಸಮಿತಿ ರಚಿಸುವ ಮೂಲಕ ಸಮುದಾಯಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಮೀನುಗಾರರ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಸಭಾಪತಿ ಉಪಸ್ಥಿತರಿದ್ದರು.

click me!