GST ಯಿಂದ ಪ್ರತೀ ಭಾರತೀಯ ಕುಟುಂಬಕ್ಕೂ ಇದೆ ಲಾಭ

By Web DeskFirst Published Dec 17, 2018, 8:05 AM IST
Highlights

GST ಬಳಿಕ ಪ್ರತೀ ಭಾರತೀಯ ಕುಟುಂಬಕ್ಕೂ ಕೂಡ ಲಾಭವಾಗುತ್ತಿದೆ. GST  ಆರಂಭವಾದ ಬಳಿಕ ಭಾರತೀಯ ಕುಟುಂಬಕ್ಕೆ ಮಾಸಿಕ ಸರಾಸರಿ 320ರು. ಉಳಿತಾಯವಾಗುತ್ತಿದೆ ಎಂದು ಹಣಕಾಸು ಸಚಿವಾಲಯದ ಮೂಲವೊಂದು ತಿಳಿಸಿದೆ. 

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜಾರಿಗೆ ಬಂದ ಬಳಿಕ ಪ್ರತಿ ಭಾರತೀಯ ಕುಟುಂಬಕ್ಕೆ ಮಾಸಿಕ ಸರಾಸರಿ 320 ರು. ಉಳಿತಾಯವಾಗುತ್ತಿದೆ ಎಂದು ಹಣಕಾಸು ಸಚಿವಾಲಯದ ಮೂಲವೊಂದು ತಿಳಿಸಿದೆ. 

ಜಿಎಸ್‌ಟಿ ಜಾರಿಗೆ ಪೂರ್ವದಲ್ಲಿದ್ದ ಹಾಗೂ ಸದ್ಯ ಇರುವ ದರಗಳನ್ನು ವಿಶ್ಲೇಷಣೆಗೊಳಪಡಿಸಿದಾಗ ಈ ಮಾಹಿತಿ ತಿಳಿದುಬಂದಿದೆ. ಜಿಎಸ್‌ಟಿ ಜಾರಿಯಿಂದಾಗಿ 83 ಆಹಾರ ಹಾಗೂ ಪಾನೀಯ ಉತ್ಪನ್ನಗಳ ಮೇಲಿನ ತೆರಿಗೆ ದರದಲ್ಲಿ ಕಡಿತವಾಗಿದೆ. ಆಹಾರಧಾನ್ಯ, ಖಾದ್ಯ ತೈಲ, ಸಕ್ಕರೆ, ಚಾಕೋಲೆಟ್, ಕುರುಕಲು ತಿಂಡಿ, ಸಿಹಿ ತಿನಿಸು, ಸೌಂದರ್ಯವರ್ಧಕ ಸಾಮಗ್ರಿ, ಶೌಚಾಲಯದಲ್ಲಿ ಬಳಸುವ ಉತ್ಪನ್ನಗಳು, ವಾಶಿಂಗ್ ಪೌಡರ್, ಟೈಲ್ಸ್, ಫರ್ನಿಚರ್ಸ್‌ನಂತಹ ಇನ್ನಿತರೆ ಗೃಹಬಳಕೆಯ ವಸ್ತುಗಳಿಗೆ ಹಾಲಿ 84000 ರು. ವೆಚ್ಚ ಮಾಡುತ್ತಿದ್ದರೆ, 320 ರು. ಉಳಿತಾಯವಾಗುತ್ತಿದೆ. ಈ ಉತ್ಪನ್ನಗಳಿಗೆ ಜಿಎಸ್‌ಟಿ ಜಾರಿಗೂ ಮುನ್ನ 830 ರು. ತೆರಿಗೆ ಪಾವತಿಸಬೇಕಾಗಿತ್ತು. ಈಗ 510 ರು. ಜಿಎಸ್‌ಟಿ ಪಾವತಿಸಬೇಕಾಗಿದೆ. 

ಹೀಗಾಗಿ 320 ರು. ಉಳಿತಾಯವಾಗುತ್ತಿದೆ ಎಂದು ವೆಚ್ಚ ವಿಶ್ಲೇಷಣೆ ವರದಿಯನ್ನು ಉಲ್ಲೇಖಿಸಿ ಮೂಲವೊಂದು ಮಾಹಿತಿ ನೀಡಿದೆ. ಹಳೆಯ ತೆರಿಗೆ ವ್ಯವಸ್ಥೆಯಡಿ, ಕೇಂದ್ರ ಸರ್ಕಾರವು ಉತ್ಪಾದನಾ ತೆರಿಗೆ ಹೇರುತ್ತಿತ್ತು. 

ರಾಜ್ಯ ಸರ್ಕಾರಗಳು ವ್ಯಾಟ್ ವಿಧಿಸುತ್ತಿದ್ದವು. ಗ್ರಾಹಕರು ಈ ಎರಡು ತೆರಿಗೆಗಳನ್ನು ಭರಿಸಬೇಕಿತ್ತು. ಆದರೆ ಜಿಎಸ್‌ಟಿ ಯಲ್ಲಿ ಆ ರೀತಿ ಇಲ್ಲ. ಕೇಂದ್ರ, ರಾಜ್ಯಗಳು ವಿಧಿಸುತ್ತಿದ್ದ 17 ತೆರಿಗೆಗಳು ರದ್ದಾಗಿ ಒಂದೇ ತೆರಿಗೆ ಜಾರಿಗೆ ಬಂದಿದೆ. ಗ್ರಾಹಕರು ಖರೀದಿಸುವಾಗ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಸಾಂಬಾರ ಪುಡಿ, ಹಲ್ಲಿನ ಪುಡಿ, ಪೇಸ್ಟ್, ಕೂದಲೆಣ್ಣೆ, ಸೋಪ್, ಕಾಸ್ಮೆಟಿಕ್ಸ್, ಸುಗಂಧ ದ್ರವ್ಯ, ಡಿಟರ್ಜೆಂಟ್, ಬಟರ್ ಬನ್, ಸ್ಯಾನಿಟರಿ ವೇರ್, ಚಪ್ಪಲಿಯಂತಹ ದಿನಬಳಕೆ ವಸ್ತುಗಳಗೆ ಈ ಹಿಂದೆ ಇದ್ದಿದ್ದಕ್ಕಿಂತ ಈಗಿನ ತೆರಿಗೆ ಕಡಿಮೆ ಇದೆ ಎಂದು ಮೂಲ ವಿವರಿಸಿದೆ.

click me!