ಶೀಘ್ರ ಕಾಂಗ್ರೆಸ್ಸಿಗೆ ಸೇರಲಿದ್ದಾರೆ ಈ ಶಾಸಕ

By Web DeskFirst Published Jun 14, 2019, 7:37 AM IST
Highlights

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ವೇಳೆ ಶಾಸಕರೋರ್ವರು ಕಾಂಗ್ರೆಸ್  ಸೇರಲು ಸಜ್ಜಾಗಿದ್ದಾರೆ. 

ಬೆಂಗಳೂರು :  ಎರಡನೇ ಬಾರಿಗೆ ಎಚ್‌.ಡಿ. ಕುಮಾರಸ್ವಾಮಿ ಅವರ ಸಂಪುಟ ಸೇರ್ಪಡೆಯಾಗಲಿರುವ ರಾಣೆಬೆನ್ನೂರು ಶಾಸಕ ಆರ್‌.ಶಂಕರ್‌ ಅವರು ತಮ್ಮ ಪಕ್ಷ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ (ಕೆಪಿಜೆಪಿ)ಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ಸಕಲ ಸಿದ್ಧತೆ ಪೂರ್ಣಗೊಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಸೂಚನೆ ಮೇರೆಗೆ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ಅಗತ್ಯ ಸಿದ್ಧತೆ ನಡೆಸಿರುವ ಅವರು, ಈ ಬಗ್ಗೆ ಕೆಪಿಸಿಸಿಯಿಂದಲೂ ಅಗತ್ಯ ಪತ್ರ (ಕೆಪಿಜೆಪಿಯನ್ನು ವಿಲೀನಗೊಳಿಸಿಕೊಳ್ಳಲು ಪಕ್ಷ ಸಿದ್ಧವಿದೆ ಎಂಬುದನ್ನು ಸ್ಪೀಕರ್‌ಗೆ ತಿಳಿಸುವ ಪತ್ರ)ವನ್ನು ಪಡೆದುಕೊಂಡಿದ್ದು, ಇದನ್ನು ಚುನಾವಣಾ ಆಯೋಗ ಹಾಗೂ ಸ್ಪೀಕರ್‌ ಅವರಿಗೆ ಶೀಘ್ರವೇ ನೀಡಲಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದೆ.

ಈ ಹಿಂದೆ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದ ಶಂಕರ್‌ ಅವರು ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡಿದ್ದರು. ಈ ವೇಳೆ ಪಕ್ಷವನ್ನು ವಿಲೀನಗೊಳಿಸುವಂತೆ ಕಾಂಗ್ರೆಸ್‌ ಸೂಚಿಸಿದರೂ ಅದನ್ನು ನಿರ್ಲಕ್ಷಿಸಿದ ಪರಿಣಾಮ ಸಂಪುಟದಿಂದ ಹೊರಬೀಳಬೇಕಾಗಿ ಬಂದಿತ್ತು. ಹೀಗಾಗಿ, ಮತ್ತೆ ಕಾಂಗ್ರೆಸ್‌ ಕೋಟಾದ ಅಡಿಯಲ್ಲಿ ಸಚಿವ ಸ್ಥಾನ ಪಡೆಯಲಿರುವ ಶಂಕರ್‌ ಅವರಿಗೆ ಪಕ್ಷ ವಿಲೀನಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಇತ್ತೀಚೆಗೆ ತಾಕೀತು ಮಾಡಿದ್ದರು. ಅದರಂತೆ ಶಂಕರ್‌ ಪಕ್ಷವನ್ನು ವಿಲೀನಗೊಳಿಸಲು ಅಗತ್ಯ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಆರ್‌.ಶಂಕರ್‌ ಕೆಪಿಜೆಪಿಯ ಚುನಾಯಿತ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ಮುಂದಾಗಿದ್ದಾರೆ. ಅದಕ್ಕೆ ಅಗತ್ಯ ಸಿದ್ಧತೆ ನಡೆಸಿದ್ದಾರೆ. ಶೀಘ್ರವೇ ಅವರು ಕಾಂಗ್ರೆಸ್‌ನಲ್ಲಿ ಕೆಪಿಜೆಪಿಯನ್ನು ವಿಲೀನಗೊಳಿಸಲಿದ್ದಾರೆ.

- ದಿನೇಶ್‌ ಗುಂಡೂರಾವ್‌, ಅಧ್ಯಕ್ಷರು, ಕೆಪಿಸಿಸಿ

click me!