ಸಂಕ್ರಾಂತಿ ಬಳಿಕ ಜೆಡಿಎಸ್ ಸಚಿವ ಸ್ಥಾನ ಭರ್ತಿ : ಯಾರಿಗೆ ಅವಕಾಶ.?

By Web DeskFirst Published Jan 9, 2019, 7:39 AM IST
Highlights

ಎರಡು ಸಚಿವ ಸ್ಥಾನ ಹಾಗೂ ತನ್ನ ಪಾಲಿನ ನಿಗಮ ಮಂಡಳಿಗಳ ನೇಮಕ ಪ್ರಕ್ರಿಯೆ ಬರುವ ಸಂಕ್ರಾಂತಿ ಬಳಿಕ ಕೈಗೆತ್ತಿಕೊಳ್ಳಲು ಜೆಡಿಎಸ್‌ ತೀರ್ಮಾನಿಸಿವೆ. 

ಬೆಂಗಳೂರು :  ಬಾಕಿ ಉಳಿದಿರುವ ಎರಡು ಸಚಿವ ಸ್ಥಾನ ಹಾಗೂ ತನ್ನ ಪಾಲಿನ ನಿಗಮ ಮಂಡಳಿಗಳ ನೇಮಕ ಪ್ರಕ್ರಿಯೆ ಬರುವ ಸಂಕ್ರಾಂತಿ ಬಳಿಕ ಕೈಗೆತ್ತಿಕೊಳ್ಳಲು ಜೆಡಿಎಸ್‌ ತೀರ್ಮಾನಿಸಿದ್ದು, ಈ ಕುರಿತ ಆಯ್ಕೆಯ ಅಂತಿಮ ನಿರ್ಧಾರವನ್ನು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ನೀಡಲು ಮಂಗಳವಾರ ನಡೆದ ಜೆಡಿಎಸ್‌ ಶಾಸಕಾಂಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇದೇ ವೇಳೆ, ಸಂಕ್ರಾಂತಿ ನಂತರ ಜೆಡಿಎಸ್‌, ಪಾಲಿನ ಸಂಸದೀಯ ಕಾರ್ಯದರ್ಶಿಗಳನ್ನೂ ನೇಮಕ ಮಾಡುವ ಸಾಧ್ಯತೆಯಿದೆ.

ಶಾಸಕಾಂಗ ಸಭೆಯಲ್ಲಿ ನಿಗಮ-ಮಂಡಳಿಗಳ ನೇಮಕ ವಿಚಾರದ ಕುರಿತು ಗಂಭೀರವಾಗಿ ಚರ್ಚಿಸಲಾಯಿತು. ಆಯಾ ಪಕ್ಷಗಳಿಗೆ ಲಭ್ಯವಾಗಿರುವ ಸಚಿವ ಸ್ಥಾನಗಳಡಿಯಲ್ಲಿ ಬರುವ ನಿಗಮ ಮಂಡಳಿಗಳನ್ನು ಆಯಾ ಪಕ್ಷಗಳು ಹಂಚಿಕೆ ಮಾಡಿಕೊಳ್ಳಬೇಕು ಎಂಬ ಒತ್ತಾಯವನ್ನು ಶಾಸಕರು ಮಾಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಜಟಿಲವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಂದು ಹಂತಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಲವು ತೋರಿದರೂ ಪಕ್ಷದ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ದೇವೇಗೌಡ, ಕೆಲವು ಸ್ಥಾನಗಳು ಜೆಡಿಎಸ್‌ಗೆ ಮುಖ್ಯವಾಗಿದ್ದು, ಅವುಗಳನ್ನು ಬಿಟ್ಟುಕೊಡುವುದು ಸೂಕ್ತವಲ್ಲ. ಕಾಂಗ್ರೆಸ್‌ನೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

10 ನಿಗಮ-ಮಂಡಳಿಗಳ ಹಂಚಿಕೆಯ ಜತೆಗೆ ನಾಲ್ಕು ಸಂಸದೀಯ ಕಾರ್ಯದರ್ಶಿ ಮತ್ತು ಒಬ್ಬ ರಾಜಕೀಯ ಕಾರ್ಯದರ್ಶಿ ನೇಮಕ ಮಾಡುವಂತೆ ಶಾಸಕರು ಮನವಿ ಮಾಡಿದರು. ಶಾಸಕರ ಅಭಿಪ್ರಾಯಗಳನ್ನು ಕೇಳಿದ ದೇವೇಗೌಡರು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಕಾಂಗ್ರೆಸ್‌-ಜೆಡಿಎಸ್‌ ನಡುವೆ ಕೆಲವು ಅಸಮಾಧಾನಗಳನ್ನು ಉಭಯ ಪಕ್ಷಗಳ ಮುಖಂಡರು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಇದನ್ನು ಎರಡು ಪಕ್ಷಗಳ ನಾಯಕರು ಕುಳಿತು ಬಗೆಹರಿಸುತ್ತೇವೆ. ಸಮಸ್ಯೆಯನ್ನು ಬಗೆಹರಿಸುತ್ತಿದ್ದಂತೆ ನಿಗಮ-ಮಂಡಳಿ ನೇಮಕ ಮಾಡಲಾಗುವುದು ಎಂದು ಅಶ್ವಾಸನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಂಸದೀಯ ಕಾರ್ಯದರ್ಶಿ ನೇಮಕಕ್ಕೆ ಶಾಸಕರ ಪಟ್ಟು:

ಕಾಂಗ್ರೆಸ್‌ ಪಾಲಿನ ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಆದೇಶ ಹೊರಡಿಸಿರುವುದರಿಂದ ನಮ್ಮ ಪಕ್ಷದ ಪಾಲಿನ ಸಂಸದೀಯ ಕಾರ್ಯದರ್ಶಿಗಳನ್ನೂ ನೇಮಕ ಮಾಡಬೇಕು ಎಂಬ ಒತ್ತಾಯವನ್ನು ಜೆಡಿಎಸ್‌ ಶಾಸಕರು ಮಾಡಿದ್ದಾರೆ.

ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಗಬಹುದು ಎಂಬ ಕಾರಣಕ್ಕಾಗಿ ಜೆಡಿಎಸ್‌ ಪಾಲಿನ ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡುವುದು ಬೇಡ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಸ್ತಾವನೆಯನ್ನು ಶಾಸಕರು ಒಪ್ಪಿಲ್ಲ. ಜೊತೆಗೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರೂ ಶಾಸಕರ ಒತ್ತಾಸೆಗೆ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ, ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ಕೈಬಿಡುವ ಮೂಲಕ ಮಿತ್ರ ಪಕ್ಷ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡುವ ಪ್ರಸ್ತಾಪ ನೆನೆಗುದಿಗೆ ಬಿದ್ದಂತಾಗಿದೆ. ಸಂಕ್ರಾಂತಿ ನಂತರ ಜೆಡಿಎಸ್‌ ಪಾಲಿನ ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡುವ ಸಾಧ್ಯತೆಯಿದೆ.

click me!