
ಶ್ರೀಶೈಲ ಮಠದ
ಬೆಳಗಾವಿ[ಆ.15]: ‘ನಮ್ಗ ರೊಕ್ಕದ ಆಸೆ ಇಲ್ರಿ.. ಎದೆ ಎತ್ತರಕ್ಕ ಬೆಳೆದ ಮಗ ನಮ್ಮ ಸಂಸಾರಕ್ಕೆ ಆಸರೆ ಆಗಿದ್ರಿ.. ಬಳ್ಳಾರಿ ಹಳ್ದಾಗ ಕೊಚಕೊಂಡ ಹೋಗಿ 12 ದಿನ ಆತ್ರಿ. ಇನ್ನೂ ಅವನ ಸುಳಿವೇ ಸಿಕ್ಕಿಲ್ರಿ.. ಮಗನ ಕಳಕೊಂಡೇವ್ರಿ.. ಏನ್ ಮಾಡೋದ್ರಿ, ಎಲ್ಲಾ ನಮ್ಮ ಹಣೆಬರಹ. ಆ ದೇವರಿಗೆ ನಮ್ಮ ಮೇಲೆ ಕರುಣೆ ಇಲ್ರಿ...!’
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಬಳ್ಳಾರಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಶಿವಾನಂದ ನಾಯಕ (24)ನ ತಂದೆ ಶಂಕರ ನಾಯಕ ಅವರ ನೋವಿನ ನುಡಿಗಳಿವು. ಒತ್ತಿಬರುತ್ತಿದ್ದ ಕಣ್ಣೀರನ್ನು ತಡೆದು ಮಾತನಾಡಿದ ಅವರು, ನನ್ನ ಮಗ ಹಳ್ಳದ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ಎರಡು ವಾರವಾದರೂ ಆತನ ಪತ್ತೆಯಾಗಿಲ್ಲ. ಮಗನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಸುರಿಸುತ್ತಿರುವ ನಮ್ಮ ಕುಟುಂಬಕ್ಕೆ ಸಾಂತ್ವನ ಹೇಳಲು ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ಯಾರೂ ಬಂದಿಲ್ಲ. ನಮ್ಮ ಸಂಕಷ್ಟಕ್ಕೆ ಸ್ಪಂದಿಸಿಲ್ಲ.
‘ನಮ್ಮ ಮಗಾನ ನಮ್ಮನ್ನೆಲ್ಲ ಬಿಟ್ಟಹೋಗ್ಯಾನ್ರಿ. ನಾವು ಹಿಂಗಾಕೈತಿ ಅಂತ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ’ ಎಂದು ಕೊಚ್ಚಿಕೊಂಡ ಹೋಗಿರುವ ನಮ್ಮ ಮಗನ ಪತ್ತೆ ಹಚ್ಚಿಕೊಡುವಂತೆ ನಾಯಕ ದಂಪತಿ ಕಂಡ ಕಂಡವರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆ.3ರಂದು ಮಧ್ಯಾಹ್ನ ಬಳ್ಳಾರಿ ಹಳ್ಳದ ಪ್ರವಾಹ ವೀಕ್ಷಣೆಗೆ ಸೈಕಲ್ ಮೇಲೆ ತೆರಳಿದ್ದ ಶಿವಾನಂದ ಸೈಕಲ್ ಸಮೇತ ಕಾಲುಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ಈ ಬಡ ಕುಟುಂಬಕ್ಕೆ ಶಿವಾನಂದನೇ ಆಸರೆಯಾಗಿದ್ದ. ‘10 ವರ್ಷಗಳಿಂದ ರಸ್ತೆ ಬದಿ ಎಳನೀರು ಮಾರುತ್ತ ಬಂದಿದ್ದ. ಎದೆ ಎತ್ತರಕ್ಕೆ ಬೆಳೆದಿದ್ದ ಮಗ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ ಎಂದರೆ ನಮಗೆ ಹೇಗಾಗಬೇಡ’ ಎಂದು ಶಂಕರ ಅವರಿಗೆ ದುಃಖ ಉಮ್ಮಳಿಸಿ, ಕಣ್ಣೀರು ಹಾಕಿದರು. 2 ವಾರಗಳಿಂದ ಶಂಕರ ನಾಯಕ ದಂಪತಿ ಕಣ್ಣೀರ ಕೋಡಿ ಹರಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.