ಖಾತೆಯಲ್ಲಿದೆ ಲಕ್ಷ ಲಕ್ಷ, ಕೈಯಲ್ಲಿ ಬಿಡಿಗಾಸೂ ಇಲ್ಲ!

By Web DeskFirst Published Aug 15, 2019, 7:59 AM IST
Highlights

ಖಾತೆಯಲ್ಲಿದೆ ಲಕ್ಷ ಲಕ್ಷ, ಕೈಯಲ್ಲಿ ಬಿಡಿಗಾಸೂ ಇಲ್ಲ| ಬ್ಯಾಂಕ್‌ ದಾಖಲೆಗಳಿಲ್ಲದೆ ಹಣ ಡ್ರಾ ಮಾಡಲಾಗುತ್ತಿಲ್ಲ| ಜೋಳ ಬೆಳೆಯುತ್ತಿದ್ದ ಗದುಗಿನ ರೈತರಿಂದ ಅಕ್ಕಿಗೆ ಮೊರೆ

ಮಯೂರ ಹೆಗಡೆ

ಹುಬ್ಬಳ್ಳಿ[ಆ15]: ಇವರ ಖಾತೆಯಲ್ಲಿ ಲಕ್ಷಾಂತರ ರು. ಜಮಾ ಇದೆ. ಆದರೆ, ಕೈಯಲ್ಲಿ ಬಿಡಿಗಾಸೂ ಇರಲಿಲ್ಲ. ಹಣ ತೆಗೆದುಕೊಳ್ಳೋಣ ಎಂದರೆ ದಾಖಲೆಗಳೂ ಇರಲಿಲ್ಲ. ಅವರಿವರ ಬಳಿ ಕೈಗಡದ ನೆರವು ಕೇಳುವುದೊಂದೆ ಉಳಿದ ದಾರಿಯಾಗಿತ್ತು.

ಏಕಾಏಕಿ ಮಲಪ್ರಭೆ ನೆರೆಯ ರೂಪದಲ್ಲಿ ಬಂದಾಗ ರಾತ್ರಿ ಉಟ್ಟಬಟ್ಟೆಯಲ್ಲೇ ಕೈಗೆ ಸಿಕ್ಕ ಪರಿಕರ ಹಿಡಿದು ಓಡಿಬಂದ ಗದಗ ಜಿಲ್ಲೆಯ ಹೊಳೆಆಲೂರು ಸುತ್ತಮುತ್ತಲಿನ ಬಹುತೇಕರ ಪರಿಸ್ಥಿತಿ ಹೀಗಿದೆ. ಗದುಗಿನ ರೈಲ್ವೆ ನಿಲ್ದಾಣ, ದೇವಸ್ಥಾನಗಳಿಗೆ ಬಂದಿರುವ ಇವರ ಮನೆಯಲ್ಲೆ ಉಳಿದಿದ್ದ ಪಾಸ್‌ಬುಕ್‌, ಎಟಿಎಂ ಮತ್ತಿತರ ಎಲ್ಲ ದಾಖಲೆಗಳೂ ನೀರುಪಾಲಾಗಿವೆ.

ಐದು ದಿನಗಳ ಕಾಲ ಹಾಗೂ ಹೀಗೂ ದಿನ ದೂಡಿದ್ದ ರೈತ ಚನ್ನಪ್ಪ ಬಳಿ ಮಂಗಳವಾರ ಬಿಡಿಗಾಸೂ ಇರಲಿಲ್ಲ. ಸ್ಥಳೀಯ ಬ್ಯಾಂಕಿಗೆ ಹೋಗಿ ಹೆಸರು ಹೇಳಿ ದುಡ್ಡು ಕೊಡಿ ಎಂದರೆ ಅವರು ಸಾಧ್ಯವಿಲ್ಲ ಎಂದು ಹೇಳಿ ಕಳಿಸಿದ್ದಾರೆ. ಈ ಭಾಗದ ಹಳ್ಳಿಗಳ ಬಹುತೇಕರ ದುಸ್ಥಿತಿ ಇದು.

ದಾನಕ್ಕೆ ಬರವಿಲ್ಲ, ಪರಿಹಾರ ಸಿಕ್ಕಿಲ್ಲ:

ಹೊಳೆಮಣ್ಣೂರು, ಅಮರಗೋಳ ಮತ್ತಿತರ ಕಡೆಯ ನವಗ್ರಾಮ(ಹೊಸ ಊರು)ದ ನಿವಾಸಿಗಳಿಗೆ ವಿವಿಧ ಸಂಘಟನೆಗಳು ನೆರವು ನೀಡುತ್ತಿವೆ. ಕೈಯಲ್ಲಿ ಕಾಸಿಲ್ಲದ ಆಸ್ತಿವಂತರು, ನೂರಾರು ಕ್ವಿಂಟಲ್‌ ಜೋಳ ಬೆಳೆಯುವ ರೈತರು ಇಲ್ಲಿ ಸರದಿಯಲ್ಲಿ ನಿಂತು ಸೇರು ಅಕ್ಕಿಗಾಗಿ ಚೀಲ ಹಿಡಿದಿದ್ದರು. ಎಲ್ಲರೂ ಬಟ್ಟೆಬರೆ, ದೈನಂದಿನ ಅಗತ್ಯದ ವಸ್ತುಗಳನ್ನ ಕೊಡುತ್ತಾರೆ. ಆದರೆ, ಹಣವನ್ನೂ ಯಾರೂ ಕೊಡುವುದಿಲ್ಲ. ಸರ್ಕಾರ ಸಂತ್ರಸ್ತರಿಗೆ ಘೋಷಿಸಿದ ತಕ್ಷಣದ .3800 ಇಲ್ಲಿ ಯಾರಿಗೂ ಸಿಕ್ಕಿಲ್ಲ ಎಂದು ಹಲವರು ನೊಂದುಕೊಂಡರು.

click me!