ರೈತರಿಗೆ ಗುಡ್ ನ್ಯೂಸ್ : ಖಾತೆಗೆ ಹಣ ಜಮೆ ಮಾಡಲಿದೆ ಸರ್ಕಾರ

By Web DeskFirst Published Aug 15, 2019, 8:00 AM IST
Highlights

ರೈತರ ಖಾತೆಗೆ ಹಣ ಜಮೆ ಮಾಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. 

ಬೆಂಗಳೂರು [ಆ.15]:  ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರಿಗೆ ಪ್ರತಿ ವರ್ಷ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ 4000 ರು. ಪಾವತಿಸುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕೃತವಾಗಿ ಚಾಲನೆ ನೀಡಿದರು. ಈ ಮೂಲಕ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಮಾಡಿದ ಘೋಷಣೆಯನ್ನು ಕಾರ್ಯಗತಗೊಳಿಸಿದರು.

ಬುಧವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಮೊದಲ ಕಂತು ಎರಡು ಸಾವಿರ ರು. ವರ್ಗಾಯಿಸುವ ಯೋಜನೆಗೆ ಹಸಿರು ನಿಶಾನೆ ತೋರಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6 ಸಾವಿರ ರು. ನೆರವು ನೀಡಲಾರಂಭಿಸಿದೆ. ಬರಗಾಲ ಮತ್ತು ಅತಿವೃಷ್ಟಿಯಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಅರ್ಹ ಫಲಾನುಭವಿಗಳಿಗೆ ಹೆಚ್ಚುವರಿ ಆರ್ಥಿಕ ಸಹಾಯವಾಗಿ 4 ಸಾವಿರ ರು. ನೀಡುವ ಯೋಜನೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶದ ಯಾವುದೇ ರಾಜ್ಯಗಳು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ತನ್ನ ಬೊಕ್ಕಸದಿಂದ ಹಣ ನೀಡುವ ತೀರ್ಮಾನ ಕೈಗೊಂಡಿಲ್ಲ. ಕರ್ನಾಟಕ ರಾಜ್ಯವು ಪ್ರಥಮ ರಾಜ್ಯವಾಗಿದ್ದು, ತನ್ನ ಬೊಕ್ಕಸದಿಂದ ಹೆಚ್ಚುವರಿ 4 ಸಾವಿರ ರು. ನೀಡುತ್ತಿದೆ. ಮೊದಲನೇ ಕಂತಿನಲ್ಲಿ 2 ಸಾವಿರ ರು. ನೀಡಲಾಗುತ್ತಿದ್ದು, ಎರಡನೇ ಕಂತಿನ ಮೊತ್ತವನ್ನು ಆರ್ಥಿಕ ಸ್ಥಿತಿಗತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ವರ್ಗಾಯಿಸಲಾಗುವುದು. ಈವರೆಗೂ ಕೇಂದ್ರ ಸರ್ಕಾರವು 34,28,238 ರೈತರಿಗೆ ನಗದು ವರ್ಗಾವಣೆಗೆ ಮಂಜೂರಾತಿ ನೀಡಿದ್ದು, ರಾಜ್ಯ ಸರ್ಕಾರದಿಂದ 753.16 ಕೋಟಿ ರು. ಮೊತ್ತ ವರ್ಗಾವಣೆಗೆ ಮಂಜೂರಾತಿ ಆದೇಶ ಹೊರಡಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರವು 2200 ಕೋಟಿ ರು. ಅನುದಾನವನ್ನು ನಿಗದಿಪಡಿಸಿದೆ ಎಂದು ಹೇಳಿದರು.

click me!