ಗೌರಿ ಕೇಸ್: ಮಾರಣಹೋಮ ಕಮೆಂಟ್ ಮಾಡಿದ ಬಿಜೆಪಿ ನಾಯಕನ ಮೇಲೆ ಎಸ್'ಐಟಿ ತನಿಖೆ

By Suvarna Web DeskFirst Published Sep 8, 2017, 11:58 AM IST
Highlights

ಗೌರಿ ಲಂಕೇಶ್ ಹತ್ಯೆಯಾದ ಮರುದಿನ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರ ಸಮಾವೇಶವೊಂದರಲ್ಲಿ ಮಾತನಾಡುವಾಗ ಜೀವರಾಜ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ 'ಚೆಡ್ಡಿಗಳ ಮಾರಣಹೋಮ' ಎಂದು ಬರೆಯದೇ ಇದ್ದಿದ್ದರೆ ಇವತ್ತು ಅವರು ಸಾಯುತ್ತಿರಲಿಲ್ಲ," ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿತ್ತು.

ಬೆಂಗಳೂರು(ಸೆ. 08): ಗೌರಿ ಲಂಕೇಶ್ ಹತ್ಯೆ ಕುರಿತಾಗಿ ತಮ್ಮ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಜೀವರಾಜ್ ಅವರನ್ನು ಎಸ್ಐಟಿ ವಿಚಾರಣೆಗೊಳಪಡಿಸಲಿದೆ. ಜೀವರಾಜ್ ವಿಚಾರಣೆ ನಡೆಸುವಂತೆ ಎಸ್'ಐಟಿಗೆ ಸ್ವತಃ ಗೃಹಸಚಿವ ರಾಮಲಿಂಗಾರೆಡ್ಡಿಯವರೇ ಸೂಚಿಸಿದ್ದಾರೆ. ಜೀವರಾಜ್ ಸಾರ್ವಜನಿಕವಾಗೇ ಇಂಥ ಹೇಳಿಕೆ ಕೊಟ್ಟಿದ್ದು ತಪ್ಪು. ಅವರ ಹೇಳಿಕೆಯ ಹಿಂದಿನ ಮರ್ಮ ತಿಳಿಯುವುದು ಅಗತ್ಯವಿದೆ. ಹೀಗಾಗಿ ಅವರನ್ನು ಕರೆಸಿ ವಿಚಾರಣೆ ನಡೆಸುವಂತೆ ತನಿಖಾ ತಂಡಕ್ಕೆ ತಿಳಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಗೌರಿ ಲಂಕೇಶ್ ಹತ್ಯೆಯಾದ ಮರುದಿನ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರ ಸಮಾವೇಶವೊಂದರಲ್ಲಿ ಮಾತನಾಡುವಾಗ ಜೀವರಾಜ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ 'ಚೆಡ್ಡಿಗಳ ಮಾರಣಹೋಮ' ಎಂದು ಬರೆಯದೇ ಇದ್ದಿದ್ದರೆ ಇವತ್ತು ಅವರು ಸಾಯುತ್ತಿರಲಿಲ್ಲ," ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿತ್ತು.

ಜೀವರಾಜ್ ಅವರಷ್ಟೇ ಅಲ್ಲ, ಗೌರಿ ಲಂಕೇಶ್ ಕುರಿತಾಗಿ ಅನುಮಾನಾಸ್ಪದವಾಗಿ ಹೇಳಿಕೊಟ್ಟರೂ ಅವರನ್ನೆಲ್ಲಾ ವಿಚಾರಣೆಗೊಳಪಡಿಸಬೇಕೆಂದು ತಾನು ಎಸ್'ಐಟಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದೂ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

'ಬಿಜೆಪಿಯವರು ಒಬ್ಬರೂ ಯಾಕಿರಲಿಲ್ಲ?'
ಗೌರಿ ಲಂಕೇಶ್ ಅಂತ್ಯ ಸಂಸ್ಕಾರದಲ್ಲಿ ಭಾರತೀಯ ಜನತಾ ಪಕ್ಷದ ಒಬ್ಬರೂ ಮುಖಂಡರು ಉಪಸ್ಥಿತರಿಲ್ಲದೇ ಹೋಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲೂ ತನಿಖೆ ಮಾಡುವಂತೆ ಎಸ್'ಐಟಿಗೆ ಗೃಹ ಸಚಿವರು ಸೂಚನೆ ನೀಡಿರುವುದು ತಿಳಿದುಬಂದಿದೆ.

ಒಟ್ಟಿನಲ್ಲಿ, ಗೌರಿ ಲಂಕೇಶ್ ಅವರು ತಾವು ಸತ್ತ ಬಳಿಕವೂ ಬಲಪಂಥೀಯ ಸಂಘಟನೆಗಳ ನಿದ್ದೆಗೆಡಿಸುತ್ತಿರುವಂತೆ ಕಾಣುತ್ತಿದೆ..!

click me!