ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬೆಂಗಳೂರಿನ ಖ್ಯಾತ ಜ್ಯೋತಿಷಿ ವಿಚಾರಣೆ

By Suvarna Web DeskFirst Published Sep 20, 2017, 6:23 PM IST
Highlights

ವಿಶೇಷ ತನಿಖಾ ತಂಡ ಗೌರಿ ಹತ್ಯೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಎಡ ಹಾಗೂ ಬಲ ಪಂಥೀಯ ವಿಚಾರಧಾರೆ, ಭೂಗತ ಪಾತಕಿಗಳು ಹಾಗೂ ವೈಯಕ್ತಿಕ ದ್ವೇಷ ಸೇರಿದಂತೆ ಹಲವು ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ.

ಬೆಂಗಳೂರು(ಸೆ.20): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಖ್ಯಾತ ಜ್ಯೋತಿಷಿ ದ್ವಾರಕನಾಥ್ ಅವರನ್ನು ಎಸ್'ಐಟಿ ವಿಚಾರಣೆಗೆ ಒಳಪಡಿಸಿದೆ.

ವಿಶೇಷ ತನಿಖಾ ತಂಡ ಗೌರಿ ಹತ್ಯೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಎಡ ಹಾಗೂ ಬಲ ಪಂಥೀಯ ವಿಚಾರಧಾರೆ, ಭೂಗತ ಪಾತಕಿಗಳು ಹಾಗೂ ವೈಯಕ್ತಿಕ ದ್ವೇಷ ಸೇರಿದಂತೆ ಹಲವು ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಗೌರಿಯವರ ಸಹೋದರ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 2 ದಿನಗಳಿಂದ ಮಾಜಿ ಭೂಗತ ಪಾತಕಿಗಳಾದ ಮುಲಾಮ, ಅಗ್ನಿ ಶ್ರೀಧರ್, ಮುತ್ತಪ್ಪ ರೈ ಸೇರಿರಂತೆ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈಗ ನಗರದ ಖ್ಯಾತ ಜ್ಯೋತಿಷಿ ದ್ವಾರಕನಾಥ್ ಅವರನ್ನು ಇಂದು ಮಧ್ಯಾಹ್ನ 12 ಗಂಟೆಗೆ ಆರ್.ಟಿ. ನಗರದ ಅವರ ನಿವಾಸಕ್ಕೆ ತೆರಳಿ ಸುಮಾರು 4 ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಗಿದೆ. ದ್ವಾರಕನಾಥ್ ಅವರು ಪತ್ರಿಕೆಯಲ್ಲಿನ ವರದಿಗೆ ಸಂಬಂಧಿಸಿದಂತೆ ಗೌರಿ ಲಂಕೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಲಾಗಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ಸಂದರ್ಭದಲ್ಲೂ ಆದಾಯ ತೆರಿಗೆ ಅಧಿಕಾರಿಗಳು ದ್ವಾರಕನಾಥ್ ಅವರನ್ನು ತನಿಖೆಗೊಳಪಡಿಸಿದ್ದರು.           

click me!