
ನಾಡಹಬ್ಬ ದಸರಾ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿಗೆ ದೇಶ-ವಿದೇಶಗಳಿಂದ ಲಗ್ಗೆ ಇಡುವ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಸುತ್ತಮುತ್ತಲ ಪ್ರವಾಸಿ ಸ್ಥಳಗಳನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಸೀಮಿತ ಅವಧಿಗೆ ದಸರಾ ವಿಶೇಷ ಪ್ರವಾಸದ ಪ್ಯಾಕೇಜ್ ರೂಪಿಸಿದೆ.
‘ಗಿರಿ ದರ್ಶಿನಿ’, ‘ಜಲ ದರ್ಶಿನಿ’ ಹಾಗೂ ‘ದೇವ ದರ್ಶನಿ’ ಹೆಸರಿನಲ್ಲಿ ಒಂದು ದಿನದ ವಿಶೇಷ ಪ್ಯಾಕೇಜ್ ರೂಪಿಸಲಾಗಿದೆ. ಈ ಮೂಲಕ ಪ್ರವಾಸಿಗರಿಗೆ ನಿಗಮದ ಹವಾನಿಯಂತ್ರಿತ ಬಸ್‌ಗಳಲ್ಲಿ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳು, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳ ಪ್ರಸಿದ್ಧ ಪ್ರವಾಸಿ ತಾಣಗಳ ಪರಿಚಯಿಸಲಾಗುತ್ತಿದೆ.
ಈ ಒಂದು ದಿನದ ಪ್ಯಾಕೇಜ್‌ಗೆ ವಯಸ್ಕರು ಮತ್ತು ಮಕ್ಕಳಿಗೆ ಪ್ರತ್ಯೇಕ ಟಿಕೆಟ್ ದರ ನಿಗದಿಗೊಳಿಸಲಾಗಿದೆ. ಸೆಪ್ಟಂಬರ್ 24ರಿಂದ ಆರಂಭಗೊಳ್ಳುವ ಪ್ಯಾಕೇಜ್ ಅಕ್ಟೋಬರ್ 5ಕ್ಕೆ ಅಂತ್ಯಗೊಳ್ಳಲಿದೆ.
ಗಿರಿ ದರ್ಶಿನಿ ಪ್ಯಾಕೇಜ್‌ಗೆ ವಯಸ್ಕರಿಗೆ ₹350 ಹಾಗೂ ಮಕ್ಕಳಿಗೆ ₹175 ಟಿಕೆಟ್ ದರ ನಿಗದಿಗೊಳಿಸಲಾಗಿದೆ. ಈ ಪ್ಯಾಕೇಜ್‌ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ ವೀಕ್ಷಿಸಬಹುದು.
ಜಲದರ್ಶಿನಿ ಪ್ಯಾಕೇಜ್‌ಗೆ ವಯಸ್ಕರಿಗೆ ₹375, ಮಕ್ಕಳಿಗೆ ₹175. ಗೋಲ್ಡನ್ ಟೆಂಪಲ್, ದುಬಾರೆ ಫಾರೆಸ್ಟ್, ನಿಸರ್ಗ ಧಾಮ, ಅಬ್ಬಿಜಲಪಾತ, ರಾಜಸೀಟ್, ಹಾರಂಗಿ ಜಲಾಶಯ, ಕೆಆರ್‌ಎಸ್ ಜಲಾಶಯ ಕಣ್ತುಂಬಿಕೊಳ್ಳಬಹುದು.
ಅಂತೆಯೆ ದೇವ ದರ್ಶಿನಿ ಪ್ಯಾಕೇಜ್‌ನಲ್ಲಿ ನಂಜನಗೂಡು, ತಲಕಾಡು, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‌ಎಸ್ ವೀಕ್ಷಿಸಬಹುದಾಗಿದೆ. ಈ ಪ್ಯಾಕೇಜ್‌ಗೆ ವಯಸ್ಕರಿಗೆ ₹275 ಹಾಗೂ ಮಕ್ಕಳಿಗೆ ₹140 ಟಿಕೆಟ್ ದರ ನಿಗದಿಗೊಳಿಸಲಾಗಿದೆ.
ಈ ಪ್ಯಾಕೇಜ್ ಪ್ರವಾಸದ ಬಸ್‌ಗಳು ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಿಂದ ನಿತ್ಯ ಬೆಳಗ್ಗೆ 6.30ಕ್ಕೆ ಹೊರಡಲಿವೆ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ದಸರಾ ಸಂಭ್ರಮ ಕಣ್ತುಂಬಿಕೊಳ್ಳಲು ಮೈಸೂರಿಗೆ ಬರುವ ಪ್ರವಾಸಿಗರಿಗೆ ನಗರದ ಪರಂಪರೆ, ಸಂಸ್ಕೃತಿ, ಕಲೆ ಹಾಗೂ ಇತಿಹಾಸ ಪರಿಚಯಿಸುವ ಉದ್ದೇಶದಿಂದ ಮೈಸೂರು ಜಿಲ್ಲಾಡಳಿತವು ಕೆಎಸ್‌ಆರ್‌ಟಿಸಿಯ ಸಹಯೋಗದೊಂದಿಗೆ ‘ಪ್ಯಾಲೆಸ್ ಆನ್ ವ್ಹೀಲ್ಸ್’ ಎಂಬ ವಿನೂತನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕೆಎಸ್‌ಆರ್‌ಟಿಸಿ ಹವಾನಿಯಂತ್ರಿತ ಬಸ್‌ಗಳಲ್ಲಿ ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ಲಲಿತ್ ಮಹಲ್ ಅರಮನೆ, ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯ, ಇಂದಿರಾ ಗಾಂಧಿ ಮ್ಯೂಸಿಯಂ, ಚೆಲುವರಾಜಮಣ್ಣಿ ಅರಮನೆ, ರೈಲ್ವೆ ಮ್ಯೂಸಿಯಂ, ಜಯಲಕ್ಷ್ಮೀ ವಿಲಾಸ ಅರಮನೆಗಳಿಗೆ ಕರೆದೊಯ್ಯಲಾಗುವುದು. ಈ ಒಂದು ದಿನದ ವಿಶೇಷ ಪ್ರವಾಸಕ್ಕೆ ಒಬ್ಬರಿಗೆ ₹999 ನಿಗದಿಗೊಳಿಸಲಾಗಿದೆ.
ಪ್ರವಾಸದ ಮಾರ್ಗದಲ್ಲಿ ಬರುವ ಟೌನ್‌ಹಾಲ್, ದೇವರಾಜ ಮಾರ್ಕೆಟ್, ಕೆ.ಆರ್. ಆಸ್ಪತ್ರೆ, ರೈಲ್ವೆ ಕಚೇರಿಗಳು, ಮೆಟ್ರೊಪೋಲ್ ಹೋಟೆಲ್, ಮಹಾರಾಜ-ಮಹಾರಾಣಿ ಕಾಲೇಜು, ಜಿಲ್ಲಾಧಿಕಾರಿಗಳ ಕಚೇರಿ, ಕ್ರಾಫರ್ಡ್ ಭವನಗಳನ್ನೂ ಪರಿಚಯಿಸಲಾಗುವುದು. ಪ್ರವಾಸೋದ್ಯಮ ನಿಗಮದ ನುರಿತ ಮಾರ್ಗದರ್ಶಕರೊಬ್ಬರು ಅರಮನೆ ಹಾಗೂ ಪಾರಂಪರಿಕ ಕಟ್ಟಡಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಮೂಲಕ ಮಾರ್ಗದರ್ಶನ ನೀಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ವರೆಗೆ ಈ ವಿಶೇಷ ಪ್ರವಾಸ ಜರುಗಲಿದೆ. ಅಂಬಾವಿಲಾಸ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಬೆಳಗ್ಗೆ 10 ಗಂಟೆಗೆ ಪ್ರವಾಸ ಬಸ್ ಹೊರಟು ಸಂಜೆ 6.30ಕ್ಕೆ ಇದೇ ಸ್ಥಳ ತಲುಪಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.