
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಲ್ಲಿ ಆಂಧ್ರಪ್ರದೇಶಕ್ಕೂ ಪಾಲಿರುವುದು ಎಲ್ಲರಿಗೂ ಗೊತ್ತು. ಆದರೆ, ಆ ಜಲಾಶಯದಲ್ಲಿ ಸಂಗ್ರಹವಾದ ಹೂಳು ಮಾರಿ ಬಂದ ಹಣದಲ್ಲೂ ನೆರೆಯ ರಾಜ್ಯಕ್ಕೆ ಪಾಲು ಕೊಡಬೇಕಿರುವ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ!
ತುಂಗಭದ್ರಾ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಆಂಧ್ರ ಸರ್ಕಾರ ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ಆದರೆ ಇದೀಗ ನಾಡಿನ ರೈತ ಬಾಂಧವರೆಲ್ಲ ಸೇರಿ ಹೂಳೆತ್ತುತ್ತಿರುವ ಸಂದರ್ಭದಲ್ಲಿ ಅದನ್ನು ಮಾರಾಟ ಮಾಡಿ ಬರುತ್ತಿರುವ ಆದಾಯದಲ್ಲಿ ಬರೋಬ್ಬರಿ ಅರ್ಧದಷ್ಟುಮೊತ್ತ ಆಂಧ್ರದ ಪಾಲಾಗುತ್ತಿದೆ. ದೇಶದ ಯಾವ ಜಲಾಶಯದಲ್ಲೂ ಇಲ್ಲದ ನಿಯಮವನ್ನು ಎರಡೂ ರಾಜ್ಯಗಳ ಅಧಿಕಾರಿಗಳು ಹಾಗೂ ಕೇಂದ್ರದ ಪ್ರತಿನಿಧಿ ಯನ್ನು ಒಳಗೊಂಡಿರುವ ತುಂಗಭದ್ರಾ ಮಂಡಳಿ ಮಾಡಿರುವುದೇ ಇದಕ್ಕೆ ಕಾರಣ.
ನಡೆಯುತ್ತಿರುವುದೇನು?: ರೈತರು ಸ್ವಯಂಪ್ರೇರಿತರಾಗಿ ತುಂಗಭದ್ರಾ ಜಲಾಶಯದಿಂದ ಹೂಳು ತೆಗೆಯಲು ಮುಂದಾದ ಬಳಿಕ ಹೂಳು ಖರೀದಿಸಲು ವಿವಿಧ ಕಂಪನಿಗಳು ಮುಂದೆ ಬಂದಿವೆ. ಸಿ.ಅರುಣಕುಮಾರ್, ಎಲ್‌ಎನ್‌ಟಿ ಸೇರಿ ಸುಮಾರು 6 ಕಂಪನಿಗಳು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತು ಇಟ್ಟಿಗೆ ನಿರ್ಮಾಣಕ್ಕೆ ತುಂಗಭದ್ರಾ ಜಲಾಶಯದ ಹೂಳು ಬಳಕೆ ಮಾಡಿಕೊಳ್ಳಲು ಆರಂಭಿಸಿವೆ. ಇದಕ್ಕಾಗಿ ಈ ಕಂಪನಿಗಳು ಈವರೆಗೂ ರು.26 ಲಕ್ಷ ನೀಡಿವೆ. ತಮಾಷೆಯೆಂದರೆ ಈ ಹಣದಲ್ಲಿ ಅರ್ಧಪಾಲನ್ನು ತುಂಗಭದ್ರಾ ಮಂಡಳಿ ಆಂಧ್ರಕ್ಕೆ ತೆಗೆದಿಟ್ಟಿದೆ.
ಏನು ಲೆಕ್ಕಾಚಾರ?: ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಹೆದ್ದಾರಿ ನಿರ್ಮಾಣ ಮತ್ತಿತರ ವಾಣಿಜ್ಯ ಉದ್ದೇಶಕ್ಕೆ ಭಾರೀ ಪ್ರಮಾಣದ ಮಣ್ಣಿನ ಅಗತ್ಯ ಇದೆ. ಇದಕ್ಕಾಗಿ ಆ ಕಂಪನಿಗಳ ಕಣ್ಣು ಈಗ ತುಂಗಭದ್ರಾದಿಂದ ಮೇಲೆತ್ತುವ ಮಣ್ಣಿನ ಮೇಲೆ ಬಿದ್ದಿದೆ. ಈ ಸಂಬಂಧ ಅವು ತುಂಗಭದ್ರಾ ಮಂಡಳಿಯನ್ನೂ ಸಂಪರ್ಕಿಸಿವೆ. ಈ ಬೇಡಿಕೆಯನ್ನು ಮನಗಂಡ ತುಂಗಭದ್ರಾ ಮಂಡಳಿ ಮಣ್ಣಿಗೆ ದರ ನಿಗದಿ ಮಾಡಿದೆ. ಪ್ರತಿ ಕ್ಯೂಬಿಕ್ ಮೀಟರ್‌ಗೆ ರು.30. ಹಾಗೆಯೇ ರು.30 ರಾಜಸ್ವ ಸಂಗ್ರಹಿಸುತ್ತಿದೆ. ಇದರಲ್ಲಿ ರಾಜಸ್ವ ನೇರವಾಗಿ ಕರ್ನಾಟಕ ಸರ್ಕಾರದ ಖಾತೆಗೆ ಜಮೆಯಾಗುತ್ತದೆ. ಆದರೆ, ನಿಗದಿ ಮಾಡಿರುವ ದರದಲ್ಲಿ ಅರ್ಧ ಆಂಧ್ರಕ್ಕೆ ಮತ್ತು ಅರ್ಧ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗುತ್ತಿದೆ.
ತುಂಗಭದ್ರಾವು ಅಂತಾರಾಜ್ಯ ನದಿಯಾಗಿರುವುದರಿಂದ ನೀರಿನಲ್ಲಿ ಪಾಲಿದೆ ಎನ್ನುವುದೇನೋ ಸರಿ. ಆದರೆ ರಾಜ್ಯದ ಮಣ್ಣಿನಲ್ಲೂ ಆಂಧ್ರಕ್ಕೆ ಪಾಲು ಕೊಡುವುದು ಯಾವ ನ್ಯಾಯ ಎನ್ನುವುದು ಈಗ ಎದ್ದಿರುವ ಪ್ರಶ್ನೆ. ಪ್ರಾರಂಭದಲ್ಲಿ ಇದರ ಮೊತ್ತ ಚಿಕ್ಕದಿರಬಹುದು, ಆದರೆ ಮುಂದೆ ಇದು ಕೋಟಿ ತಲುಪಬಹುದು. ಆಗ ಅದು ಆಂಧ್ರಕ್ಕೆ ಸೇರುವುದಿಲ್ಲವೇ? ಇದನ್ನು ಪ್ರಶ್ನೆ ಮಾಡುವವರು ಯಾರು ಎನ್ನುವುದು ಈಗ ಎದ್ದಿರುವ ಪ್ರಶ್ನೆ.
ನಮ್ಮ ಮಣ್ಣಲ್ಲೂ ಆಂಧ್ರಕ್ಕೆ ಪಾಲು ನೀಡುವುದು ಯಾವ ನ್ಯಾಯ? ನೀರಿನಲ್ಲಿ ಪಾಲಿದೆಯಾದರೂ ಮಣ್ಣಲ್ಲಿ ಪಾಲು ಇರಲು ಹೇಗೆ ಸಾಧ್ಯ? ಇದು ಸರಿಯಲ್ಲ. ರಾಜ್ಯದ ಮಣ್ಣು ಮಾರುವುದರಿಂದ ಬರುವ ಹಣ ರಾಜ್ಯಕ್ಕೇ ಸೇರಬೇಕು.
- ಜನಾರ್ದನ ಹುಲಿಗಿ, ಸ್ಥಳೀಯ ಮುಖಂಡ
ರಾಷ್ಟ್ರೀಯ ಹೆದ್ದಾರಿ ಮತ್ತಿತರ ಕಾರ್ಯಗಳಿಗೆ ಈಗ ತುಂಗಭದ್ರಾ ಜಲಾಶಯದ ಹೂಳು ನೀಡಲು ದರ ನಿಗದಿ ಮಾಡಲಾಗಿದೆ. ಇದರಲ್ಲಿ ಶೇ.50ರಷ್ಟುಆಂಧ್ರಕ್ಕೆ ಹಾಗೂ ಶೇ.50ರಷ್ಟನ್ನು ಕರ್ನಾಟಕ ಸರ್ಕಾರಕ್ಕೆ ಜಮೆ ಮಾಡಲಾಗುತ್ತದೆ. ಇದು ತೀರಾ ಚಿಕ್ಕ ಅಮೌಂಟ್, ಅದರಲ್ಲಿ ವಿಶೇಷವೇನೂ ಇಲ್ಲ.
- ರಂಗಾರೆಡ್ಡಿ ಕಾರ್ಯದರ್ಶಿ ತುಂಗಭದ್ರಾ ಮಂಡಳಿ
ವರದಿ: ಸೋಮರೆಡ್ಡಿ ಆಳವಂಡಿ, ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.