
ಲಾಹೋರ್(ನ.27): 1947 ಆಗಸ್ಟ್ 15, ಅಂದು ಭಾರತ ಮಾತ್ರ ಇಬ್ಭಾಗವಾಗಿರಲಿಲ್ಲ. ಕೇವಲ ಪಾಕಿಸ್ತಾನ ಎಂಬ ಹೊಸ ರಾಷ್ಟ್ರ ಮಾತ್ರ ಉದಯವಾಗಿರಲಿಲ್ಲ. ಬದಲಿಗೆ ಅಂದು ಸಾವಿರಾರು ವಷರ್ಷಗಳ ಸಹೋದರತ್ವ ಸತ್ತು ಹೋಗಿತ್ತು. ಸಂಬಂಧಗಳು ಏಕಾಏಕಿ ದೂರವಾಗಿದ್ದವು ಅಥವಾ ಇಲ್ಲವೇ ಆಗಿದ್ದವು.
ಭಾರತ-ಪಾಕಿಸ್ತಾನ ವಿಭಜನೆ ಎಂಬ ಕರಾಳ ಇತಿಹಾಸ ಬಿಟ್ಟು ಹೋಗಿರುವ ಕಹಿ ನೆನಪುಗಳು ಅಷ್ಟಿಷ್ಟಲ್ಲ. ಕ್ಷಣಾರ್ಧದಲ್ಲಿ ಸಂಬಂಧಗಳು, ಗೆಳೆತನ ಎಲ್ಲವೂ ಗಡಿಯ ಆ ಕಡೆ ಮತಯ್ತು ಈ ಕಡೆ ಹರಿದು ಹಂಚಿ ಹೋಗಿದ್ದವು.
ಅದರಂತೆ ವಿಭಜನೆ ಬಳಿಕ ತನ್ನ ಮುಸ್ಲಿಂ ಸಹೋದರಿಯರನ್ನು ಕಳೆದುಕೊಂಡಿದ್ದ ಭಾರತೀಯ ಸಿಖ್ ವೋರ್ವನ ಕಥೆ ಇದು. ಎಲ್ಲರಿಗೂ ತಿಳಿದಂತೆ ಲಾಹೋರ್ ಸಮೀಪ ಇರುವ ನಾನ್ಕಾನ ಸಾಹಿಬ್ ಇದೀಗ ಭಾರತೀಯ ಯಾತ್ರಾರ್ಥಿಗಳಿಗೆ ತೆರೆದಿದೆ.
ಈ ವೇಳೆ ನಾನ್ಕಾನ್ ಸಾಹೀಬ್ ಗೆ ಭೇಟಿ ನೀಡಿದ್ದ ಸರ್ದಾರ್ ಬಯಾಂತ್ ಸಿಂಗ್ ವಿಭಜನೆ ಕಾಲದಲ್ಲಿ ಕಳೆದುಕೊಂಡಿದ್ದ ತಮ್ಮಿಬ್ಬರು ಮುಸ್ಲಿಂ ಸಹೋದರಿಯರನ್ನು ಭೇಟಿಯಾಗಿದ್ದಾರೆ. ಗಡಿ ಸಮೀಪದ ಗುರುದಾಸ್ ಪುರ್ ಬಳಿ ಬಯಾಂತ್ ಸಿಂಗ್, ಉಲ್ಫತ್ ಬಿಬಿ ಮತ್ತು ಮೈರಾಜ್ ಬಿಬಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು.
ಆದರೆ ವಿಭಜನೆ ಬಳಿಕ ಸರ್ದಾರ್ ಬಯಾಂತ್ ಸಿಂಗ್ ಕುಟುಂಬ ಪಾಕಿಸ್ತಾನಕ್ಕೆ ಹೊರಟು ಹೋಯಿತು. ಆದರೆ ಸರ್ದಾರ್ ಬಯಾಂತ್ ಸಿಂಗ್ ಮಾತ್ರ ಭಾರತದಲ್ಲೇ ಉಳಿದರು. ಬಳಿಕ ಇವರ ತಾಯಿ ಅಲ್ಲಾ ರಖ್ಖಿ, ತಮ್ಮ ನೆರೆಹೊರೆಯವರ ಸಹಾಯದಿಂದ ಬಯಾಂತ್ ಸಿಂಗ್ ಅವರನ್ನು ಸಂಪರ್ಕ ಮಾಡಿದ್ದರೂ, ನೇರ ಭೇಟಿ ಸಾಧ್ಯವಾಗಿರಲಿಲ್ಲ.
ಆದರೆ ನಾನ್ಕಾನ್ ಸಾಹೀಬ್ ಭೇಟಿಗೆ ಅವಕಾಶ ಪಡೆದ ಸರ್ದಾರ್ ಬಯಾಂತ್ ಸಿಂಗ್, 70 ವರ್ಷಗಳ ಬಳಿಕ ಕೊನೆಗೂ ತಮ್ಮ ಸಹೋದರಿಯರನ್ನು ಭೇಟಿ ಮಾಡುವಲ್ಲಿ ಯಶಶ್ವಿಯಾಗಿದ್ದಾರೆ. ಬಯಾಂತ್ ಸಿಂಗ್, ಉಲ್ಫತ್ ಬಿಬಿ ಮತ್ತು ಮೈರಾಜ್ ಬಿಬಿ ಒಂದಾದ ಈ ಕ್ಷಣ ಭಾರತ ಮತ್ತು ಪಾಕ್ ಎರಡೂ ರಾಷ್ಟ್ರಗಳ ಕಣ್ಣಾಲಿಗಳನ್ನು ಒದ್ದೆ ಮಾಡಿದ್ದು ಸುಳ್ಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.