ಇಬ್ಬರು ದುರಹಂಕಾರಿಗಳಿಗೆ ಜನರು ಪಾಠ ಕಲಿಸಿದ್ದಾರೆ: ಸಿಧು

By Suvarna Web DeskFirst Published Mar 11, 2017, 7:13 AM IST
Highlights

ಪಂಜಾಬ್'ನ ಖಜಾನೆಯನ್ನು ಈ ಕಳ್ಳರು ಲೂಟಿ ಮಾಡಿದ್ದಾರೆ. ಅವರಿಂದ ರಾಜ್ಯವನ್ನು ಬಚಾವ್ ಮಾಡುವ ಕಾಲ ಬಂದಿದೆ ಎಂದು ಸಿಧು ಹೇಳಿದ್ದಾರೆ.

ಪಂಜಾಬ್ ಚುನಾವಣೆಯ ಫಲಿತಾಂಶ

ಅಮೃತಸರ್(ಮಾ. 11): ಪಂಜಾಬ್'ನಲ್ಲಿ ಇಬ್ಬರು ದುರಹಂಕಾರಿಗಳಿಗೆ ಜನತೆ ಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನವಜ್ಯೋತ್ ಸಿಂಗ್ ಸಿಧು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಾಜಿ ಬಿಜೆಪಿ ಸಂಸದ ಸಿಧು, ಪಂಜಾಬ್ ಸಿಎಂ ಹಾಗೂ ಶಿರೋಮಣಿ ಅಕಾಲಿ ದಳದ ಪ್ರಕಾಶ್ ಸಿಂಗ್ ಬಾದಲ್ ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಅವರಿಬ್ಬರ ಹೆಸರು ಪ್ರಸ್ತಾಪಿಸದೆಯೇ ಅವರನ್ನು ದುರಹಂಕಾರಿಗಳೆಂದು ಸಿಧು ಬಣ್ಣಿಸಿದ್ದಾರೆ.

ಪಂಜಾಬ್'ನ ಖಜಾನೆಯನ್ನು ಈ ಕಳ್ಳರು ಲೂಟಿ ಮಾಡಿದ್ದಾರೆ. ಅವರಿಂದ ರಾಜ್ಯವನ್ನು ಬಚಾವ್ ಮಾಡುವ ಕಾಲ ಬಂದಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳು ತಾಂಡವವಾಡುತ್ತಿವೆ. ಅವುಗಳನ್ನು ನಿಗ್ರಹಿಸಬೇಕಿದೆ ಎಂದು ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಧು ಹೇಳಿದ್ದಾರೆ.

ಕಾಂಗ್ರೆಸ್'ಗೆ ಸ್ಫೂರ್ತಿಯಾಗಲಿ:
ದೇಶಾದ್ಯಂತ ಅನೇಕ ಚುನಾವಣೆಗಳಲ್ಲಿ ಸೋಲುತ್ತಿರುವ ಕಾಂಗ್ರೆಸ್ ಪಕ್ಷವು ಪಂಜಾಬ್ ಚುನಾವಣೆಯನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಲಿ ಎಂದು ಸಿಧು ಕರೆಕೊಟ್ಟಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಜಯಿಸಿದಂತೆ ಬೇರೆ ರಾಜ್ಯದಲ್ಲೂ ಕಾಂಗ್ರೆಸ್ ಗೆಲುವಿನ ನಗೆ ಬೀರಲಿ ಎಂದು ಸಿಧು ಹಾರೈಸಿದ್ದಾರೆ.

ಪಂಜಾಬ್'ನಲ್ಲಿ ಕಾಂಗ್ರೆಸ್'ಗೆ ಬಹುಮತ ಬರುವುದಿಲ್ಲವೆಂದು ಹಲವು ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿದ್ದವು. ಈ ಸಮೀಕ್ಷೆಗಳ ಬಗ್ಗೆ ನಿನ್ನೆ ಖಾರದ ಪ್ರತಿಕ್ರಿಯೆ ನೀಡಿದ್ದ ಸಿಧು, ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ಬರುತ್ತದೆ ಎಂದು ಹೇಳಿದ್ದರು.

ಪಂಜಾಬ್'ನಲ್ಲಿ ಕಾಂಗ್ರೆಸ್ ಗೆಲ್ಲುತ್ತಿರುವ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಸಿಧು ಅವರು ಡಿಸಿಎಂ ಅಥವಾ ಪ್ರಮುಖ ಖಾತೆ ಇರುವ ಸಚಿವ ಸ್ಥಾನ ಪಡೆಯುವ ಸಂಭವವಿದೆ.

ಸಿಧು ಅವರು ಈ ಮೊದಲು ಭಾರತೀಯ ಜನತಾ ಪಕ್ಷದಲ್ಲಿದ್ದರು. ಆದರೆ, ಪಂಜಾಬ್'ನ ವಿಚಾರದಲ್ಲಿ ತಲೆಹಾಕದಂತೆ ನಿರ್ಬಂಧಿಸಿದ್ದರಿಂದ ಅವರು ಬಿಜೆಪಿ ತೊರೆದ ಅವರು ಆಮ್ ಆದ್ಮಿ ಪಕ್ಷ ಸೇರುವ ಸುದ್ದಿ ಕೇಳಿಬಂದಿತ್ತು. ಆದರೆ, ಸಿಧು ವಿಚಾರದಲ್ಲಿ ಕೇಜ್ರಿವಾಲ್ ಆಸಕ್ತಿ ತೋರಲಿಲ್ಲ. ಸಿಧು ಸ್ವಂತ ಪಕ್ಷ ಕಟ್ಟುವ ಬಗ್ಗೆಯೂ ವದಂತಿಗಳಿದ್ದವು. ಆದರೆ, ಕೊನೆಗೆ ಸಿಧು ಅವರನ್ನು ಕಾಂಗ್ರೆಸ್ ಬರಮಾಡಿಕೊಂಡಿತು.

ಪಂಜಾಬ್ ಚುನಾವಣೆಯ ಫಲಿತಾಂಶ

click me!