
ಬೆಂಗಳೂರು(ಜೂನ್ 02): ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವಯೋವೃದ್ಧ ಹಾಗೂ ಬಡರೋಗಿಗೆ ಸ್ಟ್ರೆಚರ್ ಕೊಡದೇ ಅಮಾನವೀಯತೆ ತೋರಿದ ಘಟನೆ ಇಡೀ ರಾಜ್ಯಕ್ಕೆ ನಾಚಿಕೆ ತರುವಂತಿದೆ. ಆದರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದು ಲೆಕ್ಕಕ್ಕೇ ಇಲ್ಲದ ವಿಷಯ. ಪತ್ರಕರ್ತರು ರಿಯಾಕ್ಷನ್ ಕೇಳಿದಾಗ ಸಿಎಂ ಸಿದ್ದರಾಮಯ್ಯ ಸ್ವಲ್ಪವೂ ವ್ಯವಧಾನವಿಲ್ಲದವರಂತೆ ವರ್ತಿಸಿದ್ದಾರೆ. "ಏ ಬಿಡ್ರೀ.." ಎಂದು ಪತ್ರಕರ್ತರ ಮಾತನ್ನೇ ತುಂಡರಿಸುತ್ತಾರೆ ಸಿಎಂ.
ಆಡಳಿತ ಪಕ್ಷದವರಿಂದ ಇಂತಹ ವರ್ತನೆ ಸ್ವಲ್ಪವಾದರೂ ನಿರೀಕ್ಷಿತವೇ. ಆದರೆ, ವಿರೋಧ ಪಕ್ಷದ ಮುಖಂಡರು ಈ ಘಟನೆಯನ್ನ ಉಡಾಫೆಯಾಗಿ ಪರಿಗಣಿಸಿದ್ದು ವಿಪರ್ಯಾಸವೇ ಸರಿ. ಬಿಜೆಪಿ ಮುಖಂಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಈ ಘಟನೆ ಬಗ್ಗೆ ಕೇಳಿದಾಗ, ಅವರಿಂದ ಬಂದಿದ್ದು "ನೋ ರಿಯಾಕ್ಷನ್" ಪ್ರತಿಕ್ರಿಯೆ. ಈ ಘಟನೆ ಬಗ್ಗೆ ತನಗೇನೂ ವಿವರವಿಲ್ಲ. ಈ ಬಗ್ಗೆ ತಾನು ಮಾತನಾಡುವುದಿಲ್ಲ ಎಂದು ಬಿಎಸ್'ವೈ ಕಲಬುರ್ಗಿಯಲ್ಲಿ ಹೇಳಿರುವುದು ವರದಿಯಾಗಿದೆ.
ಏನಿದು ಘಟನೆ?
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯತನಕ್ಕೆ ಕನ್ನಡಿ ಹಿಡಿಯುವಂಥ ಘಟನೆ ಬೆಳಕಿಗೆ ಬಂದಿದೆ. ವಯೋವೃದ್ಧ ರೋಗಿಯೊಬ್ಬರನ್ನು ಸಾಗಿಸಲು ಸ್ಟ್ರೆಚರ್ ಇಲ್ಲದೆ ಅಜ್ಜಿಯೊಬ್ಬಳು ಕೈಯಿಂದಲೇ ಎಳೆದುಕೊಂಡು ಹೋದ ಘಟನೆ ವೈದ್ಯಕೀಯ ಲೋಕಕ್ಕೆ ನಾಚಿಕೆ ತರಿಸುವಂತಿತ್ತು. ಶಿವಮೊಗ್ಗದ ಕುರುಬರಪಾಳ್ಯದ ಅಮೀರ್ ಜಾನ್ ಎಂಬುವರು ಕಾಲಿಗೆ ಗಾಯಗಂಡು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ನಡೆಯಲು ಆಗದ ಅವರನ್ನು ಎಕ್ಸ್'ರೇ ರೂಮಿಗೆ ಕರೆದೊಯ್ಯಬೇಕಿತ್ತು. ಅವರ ಜೊತೆ ಇದ್ದ ಪತ್ನಿ ಫರಿದಾ ಅವರು ಸ್ಟ್ರೆಚರ್'ಗೆ ಎಷ್ಟೇ ಮನವಿ ಮಾಡಿಕೊಂಡರೂ ಆಸ್ಪತ್ರೆ ಸಿಬ್ಬಂದಿ ಕಿವಿಗೊಡಲಿಲ್ಲವೆನ್ನಲಾಗಿದೆ. ಬರೋಬ್ಬರಿ 3 ದಿನಗಳ ಕಾಲ ಸ್ಟ್ರೆಚರ್ ಕೊಡದೇ ಸತಾಯಿಸಿದ್ದಾರೆನ್ನಲಾಗಿದೆ. ಕಾದುಕಾದು ಸೋತ ಅಜ್ಜಿಯೇ ಸ್ವತಃ ರೋಗಿಯನ್ನು ನೆಲದಲ್ಲಿ ಎಳೆದುಕೊಂಡು ಹೋಗಬೇಕಾಯಿತು. ಈ ದೃಶ್ಯ ಕಂಡರೂ ಅಲ್ಲಿದ್ದ ಸಿಬ್ಬಂದಿ ಕ್ಯಾರೇ ಎನ್ನಲಿಲ್ಲ, ಸ್ಪಂದಿಸಲಿಲ್ಲ.
ಆಸ್ಪತ್ರೆ ಸಿಬ್ಬಂದಿ ಹೇಳೋದೇನು?
ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ಹೇಳುವ ಪ್ರಕಾರ, ಬೇರೊಬ್ಬ ರೋಗಿಯನ್ನು ಕರೆದೊಯ್ಯಲು ಸ್ಟ್ರೆಚರ್ ಬಳಸಲಾಗಿತ್ತು. ಅವರು ವಾಪಸ್ ಬರುವವರೆಗೂ ಕಾಯಲು ಅಜ್ಜಿಗೆ ಮನವಿ ಮಾಡಿಕೊಂಡಿದ್ದೆವು. ಅಷ್ಟು ಹೊತ್ತು ಕಾಯಲು ಆಗದೇ ಅವರೇ ರೋಗಿಯನ್ನು ಕರೆದೊಯ್ದಿದ್ದಾರೆ ಎಂದು ಸಿಬ್ಬಂದಿ ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ, ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲವು ರೋಗಿಗಳು ಗುರುತರ ಆರೋಪ ಮಾಡಿದ್ದಾರೆ. ಈ ಆಸ್ಪತ್ರೆಯಲ್ಲಿ ಪ್ರತಿಯೊಂದಕ್ಕೂ ಲಂಚ ಕೇಳುತ್ತಾರಂತೆ. ಆಸ್ಪತ್ರೆಯ ಒಳಗೆ ಬರಲು ಲಂಚ, ವೀಲ್ ಚೇರ್ ಬೇಕಾದರೆ ಲಂಚ; ಹೀಗೆ ಪ್ರತಿಯೊಂದು ಕೆಲಸಕ್ಕೂ ಲಂಚ ದಯಪಾಲಿಸಿದರೆ ಮಾತ್ರ ಕೆಲಸವಾಗುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಜಿಲ್ಲಾಸ್ಪತ್ರೆ ನಿರ್ದೇಶಕ ಸುಶೀಲ್ ಕುಮಾರ್, ಲಂಚ ಪಡೆಯುತ್ತಿರುವ ಅಂಶ ಗಮನಕ್ಕೆ ಬಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.