35 ವರ್ಷದಿಂದ ಈತ ಒಮ್ಮೆಯೂ ಹಣ ಮುಟ್ಟಿಲ್ಲ!

By Suvarna Web DeskFirst Published Feb 23, 2017, 10:31 AM IST
Highlights

ಪ್ರತಿಯೊಂದು ವ್ಯವಹಾರಕ್ಕೂ ಕೈ ಚೀಲವೇ ಬಳಕೆ | ಕಳ್ಳತನದ ಆರೋಪಕ್ಕೆ ಬೇಸತ್ತು ಹಣ ಮುಟ್ಟದ ಶಪಥ

ರಬಕವಿ/ಬನಹಟ್ಟಿ: ದೈನಂದಿನ ಅಗತ್ಯಗಳಿಗೆ ಹಣ ಬೇಕೇ ಬೇಕು. ಹಣವಿಲ್ಲದೆ ಬದುಕುವುದೇ ಕಷ್ಟಎನ್ನುವ ಸ್ಥಿತಿ ಇರುವಾಗ ಇಲ್ಲೊಬ್ಬರು ಬರೋಬ್ಬರಿ 35 ವರ್ಷಗಳಿಂದ ಹಣ ಮುಟ್ಟದೇ ಜೀವನ ಸಾಗಿಸುತ್ತಿದ್ದಾರೆ. ನಂಬಲು ಕಷ್ಟವಾದರೂ ಇದು ಸತ್ಯ!

ಬಾಗಲಕೋಟೆ ಜಿಲ್ಲೆಯ ಬನಹಟ್ಟಿನಗರದ ಸಿದ್ದರಾಯಪ್ಪ ಲಕ್ಷ್ಮಣಪ್ಪ ಸಂಕ್ರಟ್ಟಿ(68) ಎಂಬವರೇ ಹಣಮುಟ್ಟದೆ ಜೀವನ ಸಾಗಿಸುತ್ತಿರುವವರು. 35 ವರ್ಷಗಳ ಹಿಂದೆ ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದ ಸಿದ್ದರಾಯಪ್ಪ ಸಹೋದರರಿಂದ ಕಳ್ಳತನ ಮತ್ತು ಕುಟುಂಬವನ್ನು ಸಾಲಕ್ಕೆ ಸಿಲುಕಿಸಿದ ಆರೋಪ ಎದುರಿಸಿದ್ದರು. ಇದರಿಂದ ತೀವ್ರ ನೊಂದ ಅವರು ಇನ್ನು ಮುಂದೆ ಜೀವನದಲ್ಲಿ ಎಂದೂ ಕೈಯಿಂದ ಹಣ ಮುಟ್ಟುವುದಿಲ್ಲ. ಹಣದ ಹಪಾಹಪಿಯನ್ನೇ ಇಟ್ಟುಕೊಳ್ಳುವುದಿಲ್ಲ ಎಂದು ಶಪಥ ಮಾಡಿದರು. ಅಂದಿನಿಂದ ಅಂದರೆ ಆರೋಪ ಕೇಳಿ ಬಂದಂದಿನಿಂದ (1982ರ ಮೇ 28ರಿಂದ) ಈವರೆಗೂ ಅವರು ಒಂದೇ ಒಂದು ರುಪಾಯಿಯನ್ನು ಕೈಯಿಂದ ಮುಟ್ಟದೆ ಜೀವನ ನಡೆಸುತ್ತಿದ್ದಾರೆ.

‘ಕೈ ಚೀಲವೇ ಸರ್ವಸ್ವ: ಹಾಗಾದರೆ ಹೇಗೆ ವ್ಯವಹಾರ ನಡೆಸುತ್ತಾರೆ? ಈ ಕುತೂಹಲಕ್ಕೆ ಅವರ ಬಳಿಯ ಕೈಚೀಲದಲ್ಲಿ ಉತ್ತರ ಸಿಗುತ್ತದೆ. ಆ ಚೀಲದಲ್ಲಿ ಅದರಲ್ಲಿ ಮನೆಯವರೇ ಹಣ ಇಟ್ಟಿರುತ್ತಾರೆ. ಸದಾ ಅದನ್ನು ತಮ್ಮೊಂದಿಗೆ ಕೊಂಡೊಯ್ಯುವ ಸಿದ್ದರಾಯಪ್ಪ ಪ್ರತಿಯೊಂದಕ್ಕೂ ಅದನ್ನೇ ಬಳಸುತ್ತಾರೆ. ತರಕಾರಿ, ಪತ್ರಿಕೆ ಸೇರಿ ಇವರೊಂದಿಗೆ ಯಾವುದೇ ವ್ಯವಹಾರ ನಡೆಸುವವರು ತಾವೇ ಈ ಚೀಲಕ್ಕೆ ಕೈ ಹಾಕಿ ಹಣ ತೆಗೆದುಕೊಳ್ಳಬೇಕು. ಬಳಿಕ ಬಾಕಿ ಚಿಲ್ಲರೆಯನ್ನೂ ಅದರಲ್ಲೇ ಹಾಕಬೇಕು. ಯಾರಾದರೂ ನೀನೇ ಹಣ ತೆಗೆದುಕೊಡು ಎಂದರೆ ಅವರೊಂದಿಗೆ ಸಿದ್ದರಾಯಪ್ಪ ವ್ಯವಹರಿಸುವುದೇ ಇಲ್ಲ. ಸ್ಥಳೀಯ ಭದ್ರನ್ನವರ ಬಟ್ಟೆಅಂಗಡಿಯಲ್ಲಿ ಇವರು ಕೆಲಸ ಮಾಡುತ್ತಿದ್ದು, ದಿನಕ್ಕೆ .150 ವೇತನ ಪಡೆಯುತ್ತಾರೆ. ಈ ಹಣವನ್ನೂ ಬಟ್ಟೆಅಂಗಡಿ ಮಾಲೀಕರೇ ವಾರಕ್ಕೊಮ್ಮೆ ಅವರ ಕೈ ಚೀಲದಲ್ಲಿ ಇಟ್ಟುಕೊಡುತ್ತಾರೆ. 

ಪತ್ನಿಯೂ ದೂರವಾಗಿದ್ದಳು: ವಿವಾಹವಾದ ಮೇಲೆ ಪತ್ನಿ ಇವರ ಈ ವರ್ತನೆಯಿಂದ ಬೇಸತ್ತು ಮನೆ ಬಿಟ್ಟು ತವರಿಗೆ ಹೋಗುವುದಾಗಿ ಬೆದರಿಕೆಯೊಡ್ಡಿದ್ದರು. ಕೆಲ ದಿನ ತವರು ಸೇರಿದ್ದರು. ಆಗ ಕೆಲ ವರ್ಷ ಸಿದ್ದರಾಯಪ್ಪ ಪತ್ನಿಯನ್ನು ಬಿಟ್ಟು ಬದುಕಿ ತೋರಿಸಿದರೇ ವಿನಃ ಹಣ ಮುಟ್ಟಲಿಲ್ಲ. ಬಳಿಕ ಹಿರಿಯರ ಮಧ್ಯಸ್ಥಿಕೆಯಲ್ಲಿ ಪತ್ನಿ ಮತ್ತೆ ಮನೆಗೆ ಮರಳಿದರು. ಇವರಿಗೆ ಈಗ ನಾಲ್ಕು ಮಂದಿ ಮಕ್ಕಳಿದ್ದು, ಹಣ ಮುಟ್ಟದೆ ನೆಮ್ಮದಿಯ ಸಾರ್ಥಕ ಜೀವನ ಸಾಗಿಸುತ್ತಿದ್ದೇನೆ ಎನ್ನುತ್ತಾರೆ ಸಿದ್ದರಾಯಪ್ಪ.

ನಾನು ಹುಟ್ಟಿದಾಗಿನಿಂದ ಸಿದ್ದರಾಯಪ್ಪ ಅವರನ್ನು ನೋಡುತ್ತಿದ್ದೇನೆ. ಅವರು ಶಪಥದ ಬಳಿಕ ಎಂದೂ ಹಣ ಮುಟ್ಟಿದ ಉದಾಹರಣೆ ಇಲ್ಲ. ಜೀವನಕ್ಕೆ ಬೇಕಾದಷ್ಟು ಹಣ ಕೈಚೀಲದಲ್ಲಿರುತ್ತದೆ. ಅದೇ ಅವರ ಖಾತೆ. 
- ರಾಜು ಶಿರೋಳ, ಸ್ಥಳೀಯರು

ಎಂಟು ವರ್ಷಗಳಿಂದ ನಮ್ಮ ಅಂಗಡಿಯಲ್ಲಿ ಸಿದ್ದರಾಯಪ್ಪ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಾರ ಕೊಡುವ ಸಂಬಳವನ್ನು ಕೈಯಿಂದ ಮುಟ್ಟಿದವರಲ್ಲ. ಬದಲಾಗಿ ಕೈಚೀಲದಲ್ಲಿಯೇ ಇಡುತ್ತೇವೆ. ಅವರದ್ದು ಸಾತ್ವಿಕ ಬದುಕು. 
- ಬಸವರಾಜ ಭದ್ರನ್ನವರ, ವ್ಯಾಪಾರಿ

ವರದಿ: ಶಿವಾನಂದ ಮಹಾಬಲಶೆಟ್ಟಿ, ಕನ್ನಡಪ್ರಭ
(epaper.kannadaprabha.in)

click me!