ಸುಮಲತಾ ಅಂಬರೀಶ್ ಬಿಜೆಪಿಯಿಂದ ಕಣಕ್ಕೆ?

Published : Feb 23, 2017, 09:04 AM ISTUpdated : Apr 11, 2018, 01:00 PM IST
ಸುಮಲತಾ ಅಂಬರೀಶ್ ಬಿಜೆಪಿಯಿಂದ ಕಣಕ್ಕೆ?

ಸಾರಾಂಶ

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅಂಬಿ ನಿರಾಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಪತ್ನಿ ರಾಜಕೀಯಕ್ಕೆ ಬರಲಿದ್ದಾರೆ. ಸುಮಲತಾ ಅಂಬರೀಷ್ ಅವರು ಬೆಂಗ್ಳೂರಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು(ಫೆ. 23): ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿರುವ ಖ್ಯಾತ ಚಿತ್ರನಟ, ಮಾಜಿ ಸಚಿವ, ಹಾಲಿ ಶಾಸಕ ಅಂಬರೀಶ್‌ ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಚುನಾವಣಾ ರಾಜಕಾರಣದಿಂದಲೇ ಹಿಂದೆ ಸರಿಯುವ ದಿಕ್ಕಿನಲ್ಲಿ ಗಂಭೀರ ಚಿಂತನೆ ನಡೆಸಿದ್ದಾರೆ.

ಹೀಗಾಗಿ, ಅವರ ಪತ್ನಿ ಹಾಗೂ ನಟಿ ಸುಮಲತಾ ಅವರನ್ನು ಚುನಾವಣಾ ರಾಜಕಾರಣಕ್ಕೆ ತರುವ ಬಗ್ಗೆ ಬಿಜೆಪಿ ನಾಯಕರು ತೆರೆಮರೆಯಲ್ಲಿ ತೀವ್ರ ಪ್ರಯತ್ನ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಈಗಾಗಲೇ ಬಿಜೆಪಿ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿರುವ ಅಂಬರೀಶ್‌ ಕಾಂಗ್ರೆಸ್‌ ತೊರೆದರೂ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರಾಸಕ್ತಿ ತೋರಿರುವುದರಿಂದ ಅವರ ಬದಲು ಪತ್ನಿ ಸುಮಲತಾ ಅವರನ್ನಾದರೂ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ನಾಯಕರು ಪ್ರಸ್ತಾಪ ಇಟ್ಟಿದ್ದಾರೆ. ಇದಕ್ಕೆ ಅಂಬರೀಶ್‌ ಕೂಡ ಒಂದು ಹಂತದ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಆದರೆ, ಸುಮಲತಾ ಅವರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸಬಹುದು ಎಂಬುದರ ಬಗ್ಗೆ ಈವರೆಗೆ ಯಾವುದೇ ಅಂತಿಮ ನಿಲುವು ಕೈಗೊಂಡಿಲ್ಲ. ಸದ್ಯ ಅಂಬರೀಶ್‌ ಪ್ರತಿನಿಧಿಸುತ್ತಿರುವ ಮಂಡ್ಯ ಅಥವಾ ಬೆಂಗಳೂರಿನ ಯಾವುದಾದರೊಂದು ಕ್ಷೇತ್ರದ ಟಿಕೆಟ್‌ ನೀಡುವ ವಿಷಯ ಪರಿಶೀಲನೆಯಲ್ಲಿದೆ. ಬೆಂಗಳೂರಿನ ಯಶ ವಂತಪುರ ಅಥವಾ ರಾಜರಾಜೇಶ್ವರಿ ನಗರಗಳ ಪೈಕಿ ಒಂದರಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರೂ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಸುಮಲತಾ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಭವಿಷ್ಯದಲ್ಲಿ ನಿಮ್ಮನ್ನೇ ರಾಜ್ಯಸಭೆಗೆ ನಾಮಕರಣ ಮಾಡುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂಬ ಮಾತನ್ನು ಬಿಜೆಪಿ ನಾಯಕರು ನೀಡಿದ್ದಾರೆ ಎನ್ನಲಾಗಿದೆ.

ಕಾರಣ ಏನು?: ಅಂಬರೀಶ್‌ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಚಿಂತನೆ ನಡೆಸಿರುವುದಕ್ಕೆ ಸ್ಪಷ್ಟವಾದ ಕಾರಣಗಳು ಹೊರಬಿದ್ದಿಲ್ಲವಾದರೂ ಅನಾರೋಗ್ಯ ಮತ್ತು ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಾವು ಸಕ್ರಿಯವಾಗಿ ರಾಜಕಾರಣ ಮಾಡುವುದು ಸಾಧ್ಯವಾಗಲಿಕ್ಕಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಅಂಬರೀಶ್‌ ಅವರು ತಟಸ್ಥರಾಗಿಯೇ ಮುಂದುವರೆದಿದ್ದಾರೆ ಎಂಬ ಮಾತೂ ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ.

ಕಾಂಗ್ರೆಸ್‌ ತೊರೆದಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಯಾದಲ್ಲಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಟಿಕೆಟ್‌ ನೀಡುವುದು ಕಷ್ಟವಾಗಬಹುದು. ಮೇಲಾಗಿ ಅಂಬರೀಶ್‌ ಮತ್ತು ಕೃಷ್ಣ ಅವರು ಇದುವರೆಗೆ ಒಂದೇ ಪಕ್ಷದಲ್ಲಿದ್ದರೂ ರಾಜಕೀಯವಾಗಿ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರು. ಇಂಥ ಪರಿಸ್ಥಿತಿಯಲ್ಲಿ ಮಂಡ್ಯದ ಬದಲು ಬೆಂಗಳೂರಿನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತ ಎಂಬ ಚಿಂತನೆ ನಡೆದಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಲತಾ ಅವರಿಗೆ ಸೂಕ್ತವಾಗಬಲ್ಲಂಥ ಕ್ಷೇತ್ರಗಳು ರಾಜರಾಜೇಶ್ವರಿ ನಗರ ಮತ್ತು ಯಶವಂತಪುರ. ಸದ್ಯ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯೆಯಾಗಿರುವ ಶೋಭಾ ಕರಂದ್ಲಾಜೆ ಅವರು ಹಿಂದೆ ಯಶವಂತಪುರದಿಂದಲೇ ಸ್ಪರ್ಧಿಸಿ ಸಚಿವರಾಗಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸಾಗುವ ಬಗ್ಗೆ ಇನ್ನೂ ಸ್ಪಷ್ಟಚಿತ್ರಣ ದೊರೆತಿಲ್ಲ. ಎರಡೂ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಮತದಾರರು ನಿರ್ಣಾಯಕರಾಗಿರುವುದರಿಂದ ಸುಮಲತಾ ಅವರ ಸ್ಪರ್ಧೆಗೆ ಸುರಕ್ಷಿತ ಎಂಬ ನಿಲವಿಗೆ ಬರಲಾಗಿದೆ. ಒಂದು ವೇಳೆ ಶೋಭಾ ಕರಂದ್ಲಾಜೆ ಅವರು ರಾಜ್ಯರಾಜಕಾರಣಕ್ಕೆ ಮರಳುವುದು ನಿಶ್ಚಿತವಾದಲ್ಲಿ ಕ್ಷೇತ್ರದ ಆಯ್ಕೆಯಲ್ಲಿ ಅವರಿಗೇ ಮೊದಲ ಆದ್ಯತೆ ಸಿಗಲಿದೆ. ಎರಡೂ ಕ್ಷೇತ್ರಗಳು ಮುಂದಿನ ಬಾರಿ ಬಿಜೆಪಿ ತೆಕ್ಕೆಗೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಏನಿದು ಲೆಕ್ಕಾಚಾರ?
* ಕಾಂಗ್ರೆಸ್‌ ತೊರೆದರೂ ಚುನಾವಣಾ ರಾಜಕೀಯ ಬಗ್ಗೆ ಅಂಬಿ ಅನಾಸಕ್ತಿ
* ಹಾಗಾಗಿ, ಸುಮಲತಾರನ್ನು ಚುನಾವಣಾ ಕಣಕ್ಕಿಳಿಸಲು ಗಂಭೀರ ಚಿಂತನೆ
* ಈ ಬಗ್ಗೆ ಈಗಾಗಲೇ ಬಿಜೆಪಿ ನಾಯಕರ ಜೊತೆ ಅಂಬರೀಶ್‌ ಮಾತುಕತೆ
* ಒಕ್ಕಲಿಗ ಪ್ರಾಬಲ್ಯದ ರಾಜರಾಜೇಶ್ವರಿ ನಗರ/ಯಶವಂತಪುರದಿಂದ ಸ್ಪರ್ಧೆ?

ವರದಿ: ವಿಜಯ್ ಮಲಗಿಹಾಳ, ಕನ್ನಡಪ್ರಭ
(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ
ಪಾಕಿಸ್ತಾನ ಸೇನೆಯಲ್ಲಿರುವ ಮಹಿಳಾ ಸೇನಾಧಿಕಾರಿಗಳ ಸಂಖ್ಯೆ ಎಷ್ಟು?