
ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ದೃಢ ಸಂಕಲ್ಪ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದರು. ಜತೆಗೆ ‘ಟೆಂಪಲ್ ರನ್’ ಅನ್ನು ಮುಂದುವರಿಸಿದರು.
ಇದೇ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ವರುಣದಿಂದ ಕಣಕ್ಕಿಳಿಯುವ ಕುರಿತು ಪ್ರತಿಕ್ರಿಯಿಸಿದ ಅವರು, ವರುಣ ಕ್ಷೇತ್ರದಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಆದರೆ ಯಾರು ಗೆಲ್ಲಬೇಕು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಒಳ್ಳೆ ಕೆಲಸ ಮಾಡಿರುವವರನ್ನು ವರುಣ ಜನತೆ ಹರಸುತ್ತಾರೆ ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ಮತಾಂಧ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು. ಚಾಮುಂ ಡೇಶ್ವರಿ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರವಾಗಿದ್ದು, ಇಲ್ಲಿಂದಲೇ ನನ್ನ ಕೊನೆಯ ಚುನಾವಣೆ ಎದುರಿಸಿ ಗೆದ್ದು ಬಂದು ಜನರ ಋಣ ತೀರಿಸುತ್ತೇನೆ. ನಾನು ನಂಬಿರುವ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಿಂಚಿನ ಸಂಚಾರ: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಳಪಡುವ ಮೈಸೂರು ತಾಲೂಕು ಇಲವಾಲ ಹೋಬಳಿಯ ಮೈದನಹಳ್ಳಿ, ಮೇಗಳಾಪುರ, ಮಲ್ಲೇಗೌಡನ ಕೊಪ್ಪಲು, ಉಂಡವಾಡಿ, ಚಿಕ್ಕನಹಳ್ಳಿ, ಆನಂದೂರು, ಕಲ್ಲೂರು, ನಾಗನಹಳ್ಳಿ, ಯಡಹಳ್ಳಿ, ರಾಮನಹಳ್ಳಿ, ಸಾಗರಕಟ್ಟೆ, ಹೊಸಕೋಟೆ, ಯಾಚೇಗೌಡನಹಳ್ಳಿ, ದಡದಕಲ್ಲಹಳ್ಳಿ, ಗುಂಗ್ರಾಲ್ ಛತ್ರ, ಯಲಚಹಳ್ಳಿ, ಕರಕನಹಳ್ಳಿ, ಈರಪ್ಪನಕೊಪ್ಪಲು, ಹಳೆಕಾಮನಕೊಪ್ಪಲು, ನಾಗವಾಲ, ಇಲವಾಲ ಗ್ರಾಮಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸಿದ್ದರಾಮಯ್ಯ ರೋಡ್ ಶೋ ನಡೆಸಿ, ಮತಯಾಚಿಸಿದರು.
ಅಲ್ಲದೆ ಮೈದನಹಳ್ಳಿ, ಮಲ್ಲೇಗೌಡನಕೊಪ್ಪಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಮಂಗಳಾರತಿ ಮತ್ತು ತೀರ್ಥಪ್ರಸಾದ ಸ್ವೀಕರಿಸಿ ದರು. ಇದಕ್ಕೂ ಮುನ್ನ, ಬಂಡೀಪುರ ಅರಣ್ಯ ಪ್ರದೇಶದಲ್ಲಿರುವ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆದು ಶನಿವಾರ ಬೆಳಗ್ಗೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ, ನಗರದ ರಮ್ಯಾ ಹೋಟೆಲ್‌ನಲ್ಲಿ ಇಡ್ಲಿ, ಉದ್ದಿನ ವಡೆ, ಸಾಂಬರ್, ರವಾ ದೋಸೆ ಸವಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.