
ಬೆಂಗಳೂರು(ಸೆ. 22): ಕಾವೇರಿ ಸಂಕಷ್ಟದಲ್ಲಿ ಸಿಲುಕಿದ್ದ ಸಿದ್ದರಾಮಯ್ಯ ಗಂಭೀರ ನಿರ್ಧಾರನ್ನು ತೆಗೆದುಕೊಂಡಿದ್ದಾರೆ. ಇದರೊಟ್ಟಿಗೆ ಸಿಎಂ ಸಿದ್ದರಾಮಯ್ಯನವರ ಮುತ್ಸದ್ಧಿತನವೂ ಪ್ರದರ್ಶನವಾಯ್ತು. ಬಹುತೇಕ ಸಿಟ್ಟು ಸೆಡುವಿನಲ್ಲೇ ಇರುತ್ತಿದ್ದ ಸಿದ್ದರಾಮಯ್ಯ ನಿನ್ನೆ ಮಾತ್ರ ದೊಡ್ಡತನ ಮೆರೆದರು.
ಸಂಪುಟ ಸಭೆ ನಂತರ ಸಿಎಂ ಸಿದ್ದರಾಮಯ್ಯ ಮಾತನಾಡಿದ ಜಾಣ್ಮೆಯ ಮಾತುಗಳು ಅವರ ಮುತ್ಸದ್ಧಿತನಕ್ಕೆ ಕನ್ನಡಿ ಹಿಡಿದಿದ್ದವು. ಬಿಜೆಪಿಯವರು ಸರ್ವಪಕ್ಷ ಸಭೆಗೆ ಬರದೇ ಇದ್ದರೂ ಒಂಚೂರು ಸೆಡವು ಕೋಪವಿಲ್ಲದೆ ಜಾಣ್ಮೆಯ ಉತ್ತರ ಕೊಟ್ಟರು. ಇದೇ ಮುತ್ಸದ್ಧಿತನವನ್ನು ನಿನ್ನೆ ಇಡೀ ದಿನ ಮರೆದರು. ಸಹೋದ್ಯೋಗಿಗಳು, ಪ್ರತಿಪಕ್ಷದವರನ್ನು ಗಣನೆಗೆ ತೆಗೆದುಕೊಂಡು ಜಾಣತನ ಮೆರೆದರು.
ಬೆಳಗ್ಗೆಯೇ ಸಂಪುಟ ಸಹೋದ್ಯೋಗಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ನೇರ ಮಂತ್ರಿ ಪರಿಷತ್ ಸಭೆ ನಡೆಸಿದರು. ಅಲ್ಲೂ ಎಲ್ಲರ ಅಭಿಪ್ರಾಯ ಪಡೆದರು. ಇದಾದ ನಂತರ ಸಿಎಂ ಸಿದ್ದರಾಮಯ್ಯ ಹೊರಟಿದ್ದು ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ. ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾಗಿ ಕಾವೇರಿ ವಿಚಾರದ ಬಗ್ಗೆ ಚರ್ಚೆ ನಡೆಸಿದರು.
ನಂತರ ಗೌಡರ ಮನೆಯಿಂದ ನೇರವಾಗಿ ಬಂದದ್ದು ಸರ್ವಪಕ್ಷ ಸಭೆಗೆ.. ಅಲ್ಲೂ ಮುತ್ಸದ್ಧಿತನ ಮೆರೆದ ಸಿದ್ದರಾಮಯ್ಯ, ದೇವೇಗೌಡರ ಪಕ್ಕವೇ ಕೂತರು. ಎಲ್ಲ ನಾಯಕರ ಅಭಿಪ್ರಾಯ ಪಡೆದರು. ದೇವೇಗೌಡರ ಮಾತನ್ನೂ ಆಲಿಸಿದರು. ಸಭೆಗೆ ಬಂದಿದ್ದ ಜೆಡಿಎಸ್ ನಾಯಕರ ಮಾತಿಗೆ ಮನ್ನಣೆ ಕೊಟ್ಟರು. ಸಹೋದ್ಯೋಗಿಗಳನ್ನು ಗಣನೆಗೆ ತೆಗೆದುಕೊಂಡರು.
ಒಟ್ಟಿನಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ ಎಂದಿನಂತೆ ಇರಲಿಲ್ಲ. ಕಾವೇರಿ ನೀರು ಹಂಚಿಕೆಯ ಗಂಭೀರ ವಿಷಯವನ್ನು ಗಾಂಭೀರ್ಯದಿಂದ ನಿಭಾಯಿಸಿದರು. ಯಾರನ್ನೂ ಕಡೆಗಣಿಸದೆ ನಡೆದುಕೊಂಡರು. ಎಲ್ಲರ ಮಾತಿಗೂ ಕಿವಿಗೊಟ್ಟರು. ಸಿಟ್ಟು ಸೆಡವು ಬದಿಗಿಟ್ಟು ಮುತ್ಸದ್ಧಿತನ ಮೆರೆದರು. ಗಟ್ಟಿ ನಿರ್ಧಾರವೊಂದನ್ನು ತೆಗೆದುಕೊಂಡು ಮತ್ತೆ ಸೌಮ್ಯವಾಗಿ ಯಾರನ್ನೂ ನೋಯಿಸದೆ, ನಿಂದಿಸದೆ, ಕಾನೂನಿನ ಕೆಂಗಣ್ಣಿಗೆ ಗುರಿಯಾಗದ ರೀತಿ ಮಾತನಾಡಿ ಸೈ ಎನಿಸಿಕೊಂಡರು.
ಬ್ಯೂರೋ ರಿಪೋರ್ಟ್ ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.