
ಬೆಂಗಳೂರು(ಸೆ. 22): ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಟ್ಟಿ ನಿರ್ಧಾರಕ್ಕೆ ಬಂದಿವೆ. ಆದ್ರೆ ಬಿಜೆಪಿ ಮಾತ್ರ ವಿಲನ್ ರೀತಿ ಬಿಂಬತವಾಯ್ತು. ಸರ್ವ ಪಕ್ಷ ಸಭೆಗೆ ಬಹಿಷ್ಕಾರ ಹಾಕುವ ಮೂಲಕ ಬಿಜೆಪಿ ಯಡವಟ್ಟು ಮಾಡಿಕೊಂಡಿದೆ ಎಂದನ್ನಿಸದೇ ಇರಲ್ಲ. ಗಂಭೀರ ವಿಷಯದ ಸಭೆಗೆ ಗೈರೋ ಹಾಗೋ ಮೂಲಕ ಬೇರೆಯದ್ದೇ ಸಂದೇಶ ರವಾನೆ ಮಾಡಿದಂತಾಗಿದೆ.
ಆರಂಭದಿಂದಲೂ ಕಾವೇರಿ ವಿಷಯದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ಸಾಧ್ಯವಿಲ್ಲ ಎನ್ನುತ್ತಲೇ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಈಗ ವಿಲನ್ ಆಗಿಬಿಡ್ತಾ ಅನ್ನಿಸದೇ ಇರದು. ಇದಕ್ಕೆ ಕಾರಣವಾಗಿದ್ದು ಕಾವೇರಿ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳಲು ಕರೆದಿದ್ದ ಸರ್ವಪಕ್ಷ ಸಭೆಗೆ ಗೈರುಹಾಜರಾಗಿದ್ದು.
ಸಿಎಂ ಸಿದ್ದರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಗೆ ಹಾಜರಾಗಿದ್ದರೆ ಬಿಜೆಪಿ ಕಳೆದುಕೊಳ್ಳುತ್ತಿದ್ದದ್ದು ಏನೂ ಇಲ್ಲ. ಆದ್ರೆ ಬಿಜೆಪಿ ಅದ್ಯಾಕೆ ಈ ನಿರ್ಧಾರಕ್ಕೆ ಬಂತೋ ಗೊತ್ತಿಲ್ಲ. ನಿನ್ನೆ ಎಲ್ಲೂ ಬಿಜೆಪಿ ಮುಖಂಡರು ಕಾಣಿಸಿಕೊಳ್ಳಲೇ ಇಲ್ಲ. ಸಿಎಂ ಸಿದ್ದರಾಮಯ್ಯನವರ ಮುತ್ಸದ್ಧಿತನದ ಎದುರು ಬಿಜೆಪಿಯ ಬಹಿಷ್ಕಾರದ ನಿರ್ಧಾರ ಕೆಟ್ಟದೆಸಿಕೊಂಡು ಬಿಟ್ಟಿತು.
ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ?
ಬಿಜೆಪಿ ಶಾಸಕರಿಗೆ, ಸಂಸದರಿಗೆ ಸರ್ವಪಕ್ಷ ಸಭೆಗೆ ಹೋಗುವ ಅಪೇಕ್ಷೆ ಇತ್ತು. ಆದ್ರೆ ಪಕ್ಷದ ನಾಯಕರ ಅಪೇಕ್ಷೆಗೆ ವಿರುದ್ಧವಾಗಿ ಯಡಿಯೂರಪ್ಪ ಕಟ್ಟಾಜ್ಞೆ ಮಾಡಿದ್ದರು. ಕೇಂದ್ರ ಸಚಿವರು, ಸಂಸದರು ಸರ್ವಪಕ್ಷ ಸಭೆಗೆ ಬರಲು ಸನ್ನದ್ಧರಾಗಿದ್ದರು. ಆದ್ರೆ ಬಿಜೆಪಿ ಪಕ್ಷಾಧ್ಯಕ್ಷರಾಗಿ, ಸರ್ವಾಧಿಕಾರ ಮೆರೆದು ಬಿಎಸ್'ವೈ ಎಡವಟ್ಟು ಮಾಡಿಕೊಂಡರು ಎನ್ನಿಸದೇ ಇರದು.
ಬೆಂಗಳೂರಲ್ಲಿ ನಡೆದ ಸರ್ವ ಪಕ್ಷ ಸಭೆಗೆ ಬಿಜೆಪಿಯ ಯಾವೊಬ್ಬ ಮುಖಂಡರು ಬಂದಿರಲಿಲ್ಲ. ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ ಕೆಲವು ಮುಖಂಡರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಮಾಭಾರತಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಕಾವೇರಿ ವಿಚಾರ ಗಂಭೀರವಾದದ್ದು. ಸರ್ವಪಕ್ಷ ಸಭೆಗೆ ಹಾಜರಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದಿತ್ತು. ಆದ್ರೆ ಸಭೆ ಬಹಿಷ್ಕಾರದಂಥ ನಿರ್ಧಾರಕ್ಕೆ ಬಂದು, ನಡೆಯುತ್ತಿರುವ ರಥೋತ್ಸವ ನೋಡುವ ಪ್ರೇಕ್ಷಕರಾಗಿ ಉಳಿದುಕೊಳ್ಳಬೇಕಾಯ್ತ. ಗಟ್ಟಿ ನಿರ್ಧಾರದಿಂದ ಸಿಎಂ ಹಾಗೂ ಸರ್ವ ಪಕ್ಷ ಸಭೆಗೆ ಹಾಜರಾಗಿ ಸಿಎಂ ಬೆಂಬಲಕ್ಕೆ ನಿಂತ ಜೆಡಿಎಸ್ ಹೀರೋಗಳಾಗಿ ಕಾಣುತ್ತಿದ್ದಾರೆ. ಬಿಜೆಪಿ ಬಹಿಷ್ಕಾರದ ನಿರ್ಧಾರದಿಂದ ವಿಲನ್ ರೀತಿ ಬಿಂಬಿತವಾಯ್ತು. ಆದ್ರೆ ಸಿಎಂ ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸಿದ ನಂತರ ಸುವರ್ಣನ್ಯೂಸ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಿಎಂ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದರು. ಜೊತೆಗೆ ಸಭೆ ಗೈರುಹಾಜರಾಗಿದ್ದನ್ನು ಸಮರ್ಥಿಸಿಕೊಂಡರು.
ಒಟ್ಟಿನಲ್ಲಿ, ಬಿಜೆಪಿಯ ಸರ್ವಪಕ್ಷ ಸಭೆಗೆ ಬಹಿಷ್ಕಾರದ ನಿರ್ಧಾರ ಪಕ್ಷಕ್ಕೇ ಮುಳುವಾಗಿದೆ. ಸಭೆಯಲ್ಲಿ ಭಾಗವಹಿಸಿದ್ದರೆ ಬಿಜೆಪಿಗೆ ನಷ್ಟವೇನೂ ಆಗುತ್ತಿರಲಿಲ್ಲ. ಆದ್ರೆ ಬಹಿಷ್ಕಾರದಿಂದ ಬೇರೆಯದ್ದೇ ಸಂದೇಶ ರವಾನೆಯಾದಂತಾಗಿದೆ. ಕಾಂಗ್ರೆಸ್ - ಜೆಡಿಎಸ್ ಗಟ್ಟಿ ನಿರ್ಧಾರಕ್ಕೆ ಬಂದು ಭಲೇ ಎನಿಸಿಕೊಂಡರೆ ಬಿಜೆಪಿ ಮಾತ್ರ ಇವರ್ಯಾಕೆ ಹೀಗೆ ಅನ್ನೋ ಅಸಮಾಧಾನಕ್ಕೆ ಕಾರಣವಾಗಿದೆ.
ಬ್ಯೂರೋ ರಿಪೋರ್ಟ್ ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.