
ಬೆಂಗಳೂರು: ಕೃಷಿ ಉತ್ಪನ್ನ ಮಾರಾಟ ಮಾಡುವ ರೈತರಿಗೆ ಕೇವಲ 24ಗಂಟೆಗಳಲ್ಲೇ ಆನ್'ಲೈನ್ ಹಣ ಪಾವತಿಸುವ ಇ ಪೇಮೇಂಟ್ ಸದ್ಯದಲ್ಲೇ ರಾಜ್ಯಾದ್ಯಂತ ಜಾರಿಯಾಗಲಿದೆ. ಕೃಷಿ ಉತ್ಪನ್ನಗಳನ್ನು ಖರೀದಿಸುವ ವರ್ತಕರು ಇನ್ನುಮುಂದೆ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಹಾಕಬೇಕಿದೆ. ಇದು ಕೃಷಿ ಕ್ಷೇತ್ರದಲ್ಲಿ ನಗದ ರಹಿತ ವ್ಯಾಪಾರ ಉತ್ತೇಜಿಸಲು ಸಹಕಾರ ಇಲಾಖೆ ಕೈಗೊಂಡ ಯೋಜನೆಯಾಗಿದೆ.
ರಾಜ್ಯದಲ್ಲಿ ಇ ಟ್ರೇಡಿಂಗ್ ಇದ್ದರೂ ರೈತರಿಗೆ ಹಣ ಪಾವತಿಯಲ್ಲಿ ವಂಚನೆ ಮತ್ತು ಕಪ್ಪು ಹಣ, ವಿಳಂಬ ಪಾವತಿಗಳ ಸಮಸ್ಯೆ ತೀವ್ರವಾಗಿತ್ತು. ಇದನ್ನು ತಡೆದು ರೈತರಿಗೆ ಹಣದ ಖಾತರಿ ಮತ್ತು ವಂಚನೆ ತಪ್ಪಿಸಲು ಡಿಜಿಟಲ್ ಇಂಡಿಯಾ ಪ್ರಭಾವದೊಂದಿಗೆ ಇಲಾಖೆ ಆನ್'ಲೈನ್ ಪೇಮೆಂಟ್ ವ್ಯವಸ್ಥೆಗೆ ಮುಂದಾಗಿತ್ತು. ಇದನ್ನು ಕೆಲವರು ವಿರೋಧಿಸಿದ್ದರಿಂದ ಪ್ರಾಯೋಗಿಕವಾಗಿ ಹುಬ್ಬಳ್ಳಿ, ಗದಗದ ಕೆಲವು ಮಾರುಕಟ್ಟೆಗಳಲ್ಲಿ ಇ ಪೇಮೆಂಟ್ ಜಾರಿಗೊಳಿಸಿ ತಾತ್ಕಾಲಿಕ ಯಶ ಸಾಧಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಸದ್ಯದಲ್ಲೇ ರಾಜ್ಯದ 161 ಎಪಿಎಂಸಿಗಳಲ್ಲಿ ಜಾರಿಗೊಳಿಸುತ್ತಿದೆ. ಇದಕ್ಕಾಗಿ ರೈತರ ಬ್ಯಾಂಕ್ ಖಾತೆ, ಆಧಾರ್ ಮತ್ತು ಇತರ ದಾಖಲೆಗಳನ್ನು ನೋಂದಾಯಿಸಲಾಗುತ್ತಿದೆ. ಹೀಗಾಗಿ ವರ್ತಕರು ಇನ್ನುಮುಂದೆ ರೈತರಿಗೆ 24ಗಂಟೆ ಒಳಗಾಗಿ ನೇರ ಖಾತೆಗೆ ಹಣ ಹಾಕಬೇಕು. ಇಲ್ಲವಾದರೆ ದಂಡ ಪಾವತಿಸಬೇಕು. ಇನ್ನೂ ತಡವಾದರೆ ವ್ಯಾಪಾರ ಪರವಾನಗಿ ರದ್ದು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸಹಕಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯದಲ್ಲೇ ಜಾಲದಲ್ಲಿ 40ಲಕ್ಷ ರೈತರು:
ರಾಜ್ಯದ ಸಹಕಾರ ಇಲಾಖೆಗೆ ಸೇರಿದ 161 ಮಾರುಕಟ್ಟೆಗಳಿದ್ದು, ಇದರಲ್ಲಿ 157 ಮಾರುಕಟ್ಟೆಗಳನ್ನು ಆನ್'ಲೈನ್ ಮಾರುಕಟ್ಟೆ ಜಾಲಕ್ಕೆ ಸೇರಿಸಲಾಗಿದೆ. ಈ ಜಾಲದಲ್ಲಿ 40ಲಕ್ಷ ರೈತರು ನೋಂದಣಿಯಾಗಿದ್ದು, 37,000 ಮಂದಿ ವರ್ತಕರೂ ಇದೇ ಜಾಲದಲ್ಲಿದ್ದಾರೆ. ಇದೇ ಜಾಲದಲ್ಲಿ ನಿತ್ಯ 91 ಕೃಷಿ ಉತ್ಪನ್ನಗಳ ಮಾರಾಟ ನಡೆಯುತ್ತದೆ. ವರ್ತಕರು ರಾಜ್ಯದ ಯಾವುದೇ ಮೂಲೆಯಿಂದ ಉತ್ಪನ್ನಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಈ ವ್ಯವಸ್ಥೆ 2013ರಿಂದಲೂ ಜಾರಿಯಲ್ಲಿದ್ದು, ಇದಕ್ಕೆ ಕೇಂದ್ರ ಸರ್ಕಾರದಿಂದ ಮೆಚ್ಚಿಗೆಯೂ ಸಿಕ್ಕಿದೆ. ಆದರೂ ಹಣ ಪಾವತಿ ಮಾತ್ರ ಇನ್ನೂ ಸಾಂಪ್ರದಾಯಿಕ ರೀತಿಯಲ್ಲೇ ನಡೆಯುತ್ತಿದ್ದು, ಇದರಿಂದ ರೈತರಿಗೆ ಆಗುತ್ತಿರುವ ವಂಚನೆ ಕಡಿಮೆಯಾಗುತ್ತಿಲ್ಲ. ವರ್ತಕರು ಆನ್'ಲೈನ್‌ನಲ್ಲಿ ವ್ಯಾಪಾರ ಮಾಡುತ್ತಿದ್ದರೂ ಹಣವನ್ನು ಖುದ್ದು ಭೇಟಿ ಅಥವಾ ಮಧ್ಯವರ್ತಿಗಳ ಮೂಲಕ ಪಾವತಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ನಿಗದಿತ ಹಾಗೂ ವ್ಯಪಾರವಾಗಿರುವ ದರದಲ್ಲಿ ನೀಡುತ್ತಿಲ್ಲ. ಹೀಗಾಗಿ ವರ್ತಕರು ಆನ್'ಲೈನ್ ಹರಾಜು ವೇಳೇ ಬಿಡ್ ಮಾಡಿದ್ದ ದರವನ್ನೇ ರೈತರಿಗೆ ಪಾವತಿಸುವಂತೆ ಮತ್ತು ಅದನ್ನು ಪಾರದರ್ಶಕರವಾಗಿರುವಂತೆ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ಹಣ ಪಾವತಿ ಹೇಗೆ?
ರೈತರು ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೋಯ್ಯುತ್ತಿದ್ದಂತೆ ಅದನ್ನು ಆನ್‌ಲೈನ್ ಮೂಲಕವೇ ಹರಾಜು ಮಾಡಲಾಗುತ್ತದೆ. ರಾಜ್ಯದ ಎಲ್ಲೋ ಮೂಲೆಯಲ್ಲಿರುವ ವರ್ತಕರೂ ಸೇರಿದಂತೆ ಎಲ್ಲರೂ ಹರಾಜಿನಲ್ಲಿ ಭಾಗವಹಿಸುತ್ತಾರೆ. ಅದರಲ್ಲಿ ರೈತರ ಉತ್ಪನ್ನಕ್ಕೆ ಇಂತಿಷ್ಟು ದರ ಎಂದು ನಿಗದಿಯಾಗುತ್ತದೆ. ಇದಕ್ಕೆ ರೈತರು ಒಪ್ಪಿದರೆ ಮಾರಾಟ ಮಾಡಬಹುದು. ಇಲ್ಲವೇ ವಾಪಸ್ ಹೋಗಬಹುದು. ಒಂದೊಮ್ಮೆ ಒಪ್ಪಿದರೆ ರೈತರು ಉತ್ಪನ್ನವನ್ನು ಮಾರುಕಟ್ಟೆಯಲ್ಲೇ ಬಿಟ್ಚು ಹೋಗುತ್ತಾರೆ. ನಂತರದ 24ಗಂಟೆಯಲ್ಲಿ ಆತನ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಒಂದೊಮ್ಮೆ ವರ್ತಕರು ತಡವಾಗಿ ಹಣ ಪಾವತಿಸಿದರೆ ಅದಕ್ಕೆ ದಂಢ ವಧಿಸಲಾಗುತ್ತದೆ. ಇನ್ನೂ ವಿಳಂಬವಾದರೆ ವರ್ತಕರ ಪರವಾನಗಿ ರದ್ದುಗೊಳಿಸಲಾಗುತ್ತದೆ.
ಈ ಯೋಜನೆಯನ್ನು ಸರ್ಕಾರ ಹೊಸದಾಗಿ ಜಾರಿಗೊಳಿಸುತ್ತಿರುವುದರಿಂದ ಅನೇಕ ಕಡೆ ವಿರೋಧ ಎದುರಾಗುವ ಸಾಧ್ಯತೆ ಇದೆ. ಇ ಪೇಮೆಂಟ್ ಮಾಡಲು ಇಚ್ಚಿಸಿದ ವರ್ತಕರು ವ್ಯಾಪಾರದಿಂದ ಹಿಂದೆ ಸರಿದರೆ ಆಗ ರಾಜ್ಯ ಸಹಕಾರ ಮಾರಾಟ ಮಂಡಳಿಯೇ ಉತ್ಪನ್ನಗಳನ್ನು ಖರೀದಿಸಲಿದೆ. ಇವರು ಖರೀದಿಸಿ ದಾಸ್ತಾನು ಮಾಡಿ ಅದನ್ನು ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಮಾರಾಟ ಮಾಡಲಿದೆ.
ಉತ್ಪನ್ನ ಮೇಲೆ ಸಾಲ ಸಿಗಲಿದೆ:
ರೈತರು ಎಪಿಎಂಸಿಯಲ್ಲಿ ಮಾರಾಟ ಮಾಡುವ ಮುನ್ನ ರಾಜ್ಯ ಸಹಕಾರ ಸಂಘಗಳ ಗೋದಾಮುಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಉಗ್ರಾಣ ನಿಮಗಳಲ್ಲಿ ದಾಸ್ತಾನು ಮಾಡಬಹುದು. ಅಂದರೆ ರೈತರ ಉತ್ಪನ್ನಗಳನ್ನು ವರ್ತಕರು ಖರೀದಿಸಲು ನಿರಾಕರಿಸಿದಾಗ ಮತ್ತು ರೈತರಿಗೆ ಸೂಕ್ತ ಬೆಲೆ ಸಿಗದಿದ್ದಾಗ ರೈತರು ದಾಸ್ತಾನು ಮೊರೆ ಹೋಗಬಹುದು. ಆಗ ರೈತರು ತಮ್ಮ ಉತ್ಪನ್ನಗಳ ಮೇಲೆ ಶೇ.೬೦ರಷ್ಟು ಹಣವನ್ನು ಮುಂಗಡವಾಗಿ ಪಡೆಯಬಹುದು ಅಥವಾ ಎಪಿಎಂಸಿಗೇ ಅಡಮಾನವಿಟ್ಟು ಸಾಲವನ್ನೂ ಪಡೆಯಬಹುದು. ಇದಕ್ಕೆ ರಾಜ್ಯ ಎಸಿಎಂಸಿ ಕಾಯ್ದೆ 1966 ಪ್ರಕಾರ ಹಣ ಮತ್ತು ಭದ್ರತೆ ಎರಡನ್ನೂ ಪಡೆಯಬಹುದಾಗಿದೆ.
ಡಿಜಿಟಲ್ ವ್ಯಾಪಾರ ಮತ್ತು ನಗದ ರಹಿತ ವ್ಯವಹಾರ ಉತ್ತೇಜಿಸಲು ಈ ಯೋಜನೆ ರೂಪಿಸಲಾಗಿದೆ. ಇದರಿಂದ ರೈತರಿಗೆ ಹಣ ಪಾವತಿಯಲ್ಲಿ ಆಗುತ್ತಿದ್ದ ವಂಚನೆ ನಿಯಂತ್ರಣವಾಗಲಿದೆ. ಸದ್ಯದಲ್ಲೇ ರಾಜ್ಯ ಎಲ್ಲಾ ಎಪಿಎಂಸಿಗಳಲ್ಲೂ ಇದನ್ನು ಜಾರಿಗೊಳಿಸಲಾಗುತ್ತಿದ್ದು, ತಯಾರಿ ನಡೆಯುತ್ತಿದೆ.
- ಎಸ್.ಎಸ್.ಪಟ್ಟಣಶೆಟ್ಟಿ, ಸಹಕಾರ ಇಲಾಖೆ ಕಾರ್ಯದರ್ಶಿ
ಕನ್ನಡಪ್ರಭ ವಾರ್ತೆ
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.