
ತುಮಕೂರು(ಸೆ.12): ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ಸಚಿವ ಎಂ.ಬಿ. ಪಾಟೀಲ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಿದ್ದಗಂಗ ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಎಂ.ಬಿ ಪಾಟೀಲ್ ಪ್ರತ್ಯೇಕ ಧರ್ಮಕ್ಕೆ ಶ್ರೀಗಳ ಬೆಂಬಲವಿದೆ ಎಂದು ಹೇಳಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದದ್ದು, ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ತುಮಕೂರು ಮಠದ ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದು ಎಂ.ಬಿ. ಪಾಟೀಲ್'ಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.
ಹೀಗಿದೆ ಶ್ರೀಗಳು ಹೊರಡಿಸಿದ ಪತ್ರಿಕಾ ಪ್ರಕಟಣೆ:
ದಿನಾಂಕ 10-09-2017ರಂದು ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್'ರವರು ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಅವರು ನಮ್ಮೊಡನೆ ವೀರಶೈವ / ಲಿಂಗಾಯತ ಸ್ವತಂತ್ರ ಧರ್ಮದ ವಿಷಯದ ಬಗ್ಗೆ ಚರ್ಚಿಸಿದಾಗ ವೀರಶೈವ ಎಂಬ ಪದ ವಿದ್ಯಾವಂತರು ಮತ್ತು ನಗರ ಪ್ರದೇಶದಲ್ಲಿ ಬಳಕೆಯಲ್ಲಿದೆ. ಲಿಂಗಾಯತ ಎಂಬ ಪದ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದ್ದು, ಈ ಎರಡೂ ಪದಗಳು ಒಂದೇ ಆಗಿದ್ದು, ಎಲ್ಲಾ ಧಾರ್ಮಿಕ ಮುಖಂಡರು ಹಾಗೂ ಸಮಾಜ ಬಾಂಧವರು ಒಂದೆಡೆ ಕುಳಿತು ಸರ್ವ ಸಮ್ಮತವಾದ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ನಮ್ಮ ಅಭಿಪ್ರಾಯ ತಿಳಿಸಿರುತ್ತೇವೆ. ಆದರೆ ಮಾನ್ಯ ಶ್ರೀ ಎಂ.ಬಿ.ಪಾಟೀಲ್ ಅವರು ಲಿಂಗಾಯತ ಪದದ ಪರವಾಗಿ ಬೆಂಬಲ ಸೂಚಿಸಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ತಿಳಿದು ಬಂದಿದೆ. ಸಮಾಜವನ್ನು ಈ ರೀತಿ ಇಬ್ಭಾಗ ಮಾಡುವ ರೀತಿಯಲ್ಲಿ ಯಾರೇ ಪ್ರಯತ್ನಿಸಿದ್ರೂ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಸಮಾಜದ ಮುಖಂಡರೆಲ್ಲ ಕುಳಿತು ಚರ್ಚಿಸಿ ಒಮ್ಮತ ರೂಪಿಸುವುದು ಅತ್ಯಂತ ಅಗತ್ಯವಾಗಿದೆ.
ಶ್ರೀ ಶಿವಕುಮಾರ ಸ್ವಾಮಿಗಳು
ಶ್ರೀ ಸಿದ್ಧಗಂಗಾ ಮಠ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.