
ಬೆಂಗಳೂರು(ಜ.05): ಗಣರಾಜ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್'ಬಾಗ್'ನಲ್ಲಿ ಈ ಬಾರಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಮುಖ್ಯ ಆಕರ್ಷಣೆ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ. ಫೆಬ್ರವರಿ ತಿಂಗಳಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿರುವ ಹಿನ್ನೆಲೆಯಲ್ಲಿ ಗೊಮ್ಮಟೇಶ್ವರ ಪ್ರತಿಕೃತಿ ಸ್ಥಾಪಿಸುವ ಮೂಲಕ ವಿಶಿಷ್ಟವಾಗಿ ನಮನ ಸಲ್ಲಿಸಲಿದೆ.
ಹೂವುಗಳಿಂದ ಗೊಮ್ಮಟೇಶ್ವರನ ಮೂರ್ತಿ ಅಚ್ಚುಕಟ್ಟಾಗಿ, ಯಥಾವತ್ತಾಗಿ ಆಕೃತಿ ಮಾಡಲು ಕಷ್ಟ. ಇದೊಂದು ಧಾರ್ಮಿಕ ವಿಚಾರವಾಗಿದ್ದು, ಚ್ಯುತಿ ಬರದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ. ಆದ್ದರಿಂದ ಬಾಹುಬಲಿಯ ಜೀವನ ವೃತ್ತಾಂತವನ್ನು ಫೈಬರ್ ಮತ್ತು ಪಿಒಪಿ ಬಳಸಿ ಮಾಡಲು ತೀರ್ಮಾನಿಸಲಾಗಿದೆ. ಉಳಿದಂತೆ ಸುಮಾರು 3 ಲಕ್ಷ ಬಿಡಿ ಹೂವುಗಳು ಹಾಗೂ 5.50 ಲಕ್ಷ ವಿವಿಧ ಜಾತಿಯ ಹೂವುಗಳ ಕುಂಡಗಳಿಂದ ಪ್ರದರ್ಶನವನ್ನು ಆಕರ್ಷಣೀಯಗೊಳಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್ ಮಾಹಿತಿ ನೀಡಿದ್ದಾರೆ.
ಲಾಲ್'ಬಾಗ್‌ನ ಗಾಜಿನಮನೆ ಪ್ರವೇಶಿಸುತ್ತಿದ್ದಂತೆ ಪಿಒಪಿ, ಫೈಬರ್, ಕಲ್ಲುಗಳಿಂದ ನಿರ್ಮಿಸಿದ 15 ಅಡಿ ಬೆಟ್ಟದಲ್ಲಿ ಫೈಬರಿನ 15 ಅಡಿ ಎತ್ತರದ ಗೊಮಟೇಶ್ವರನ ಮೂರ್ತಿ ದರ್ಶನ ಲಭ್ಯವಾಗಲಿದೆ. ಬೆಟ್ಟದ ತಪ್ಪಲಿನಲ್ಲಿ ಕೃತಕ ಅರಣ್ಯ ನಿರ್ಮಿಸಿ, ಆಯಕಟ್ಟಿನ ಜಾಗದಲ್ಲಿ ಹೂವುಗಳನ್ನು ಬಳಸಲಾಗುತ್ತಿದ್ದು, ಯಥಾವತ್ತಾದ ಗೊಮ್ಮಟಗಿರಿಯನ್ನೇ ಸೃಷ್ಟಿಸಲಾಗುತ್ತದೆ. ಎಡಭಾಗದಲ್ಲಿ ಮಹಾ ಮಸ್ತಕಾಭಿಷೇಕದ ಲಾಂಛನವನ್ನು ಸೃಷ್ಟಿಸಲಾಗುವುದು. ಇದರ ಸಮೀಪವೇ ಬಾಹುಬಲಿಯ ಪಾದ ಇರಲಿದ್ದು, ಪುಷ್ಪನಮನ ಸಲ್ಲಿಸುವಂತೆ ನಿರ್ಮಿಸಲಾಗುತ್ತಿದೆ. ಗಾಜಿನ ಮನೆ ಬಲಭಾಗದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕದ ಮಾದರಿಯನ್ನು ನಿರ್ಮಿಸಲು ತಯಾರಿ ನಡೆಸಲಾಗಿದೆ. ಇದು ಮಹಾಮಸ್ತಕಾಭಿಷೇಕವನ್ನು ನೆನಪಿಸಲಿದೆ.
ಪುಷ್ಪ ಪ್ರದರ್ಶನ: ಗಣರಾಜ್ಯೋತ್ಸವ ಅಂಗವಾಗಿ ಜ.19 ರಿಂದ 28ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. 207ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಪ್ರದರ್ಶನಕ್ಕೆ 1.65 ಕೋಟಿ ರೂ. ಅಂದಾಜು ವೆಚ್ಚ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.