‘ಜೈ ಮಹಾರಾಷ್ಟ್ರ’ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕರ್ನಾಟಕದ ಸಚಿವ ರೋಷನ್ ಬೇಗ್ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ಜನರಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ತಮಗಿದೆ ಎಂದು ಅದು ಹೇಳಿದೆ.
ಥಾಣೆ (ಮೇ.23): ‘ಜೈ ಮಹಾರಾಷ್ಟ್ರ’ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕರ್ನಾಟಕದ ಸಚಿವ ರೋಷನ್ ಬೇಗ್ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ಜನರಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ತಮಗಿದೆ ಎಂದು ಅದು ಹೇಳಿದೆ.
‘ಇಂಥ ಜನರಿಗೆ ತಕ್ಕ ಉತ್ತರ ನೀಡಲು ಶಿವಸೇನೆಗೆ ಸಾಮರ್ಥ್ಯವಿದೆ. ಆದರೆ ಇದೇ ವೇಳೆ ಇತರ ರಾಜಕೀಯ ಪಕ್ಷಗಳು ಬಳೆತೊಟ್ಟುಕೊಂಡು ಸುಮ್ಮನೆ ಕುಳಿತಿವೆ’ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಪಾಲ್ಗಾರ್ ಜಿಲ್ಲೆಯ ಬೋಯ್ಸರ್‌ನಲ್ಲಿ ‘ಬಾಳಾ ಠಾಕ್ರೆ ಕನ್ಯಾದಾನ ಯೋಜನೆ’ಯಡಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ.
ಕೆಲವು ಜನಪ್ರತಿನಿಧಿಗಳು ‘ಜೈ ಮಹಾರಾಷ್ಟ್ರ’ ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಇಂಥವರು ತಮ್ಮ ಹುದ್ದೆ ಕಳೆದುಕೊಳ್ಳಬೇಕಾಗಿ ಬರುತ್ತದೆ ಎಂದು ಕರ್ನಾಟಕದ ಸಚಿವ ರೋಷನ್ ಬೇಗ್ ಇತ್ತೀಚೆಗೆ ಹೇಳಿದ್ದರು. ಬೆಳಗಾವಿ ಮೇಯರ್ ಮತ್ತು ಇತರೆ ಎಂಇಎಸ್ ಪಾಲಿಕೆ ಸದಸ್ಯರನ್ನು ಉದ್ದೇಶಿಸಿ ಬೇಗ್ ಈ ಹೇಳಿಕೆ ನೀಡಿದ್ದರು. ಅದಕ್ಕೆ ಸಂಜಯ್ ರಾವುತ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಿಎಂ ದೇವೇಂದ್ರ ಫಡ್ನವಿಸ್ ‘ಬಾಹುಬಲಿ ೨’ ಚಿತ್ರದ ಕುರಿತು ಪ್ರಸ್ತಾಪಿಸಿದ್ದುದರ ಬಗ್ಗೆ ಪ್ರತಿಕ್ರಿಯಿಸಿದರ ರಾವುತ್, ಸಿಎಂ ಅವರು ಬೆಳಗಾವಿಗೆ ತೆರಳಬೇಕು, ಅಲ್ಲಿನ ಮರಾಠಿ ಜನರಿಗೆ ಸಿನೆಮಾದ ಟ್ರೇಲರ್ ತೋರಿಸಬೇಕು ಎಂದು ಹೇಳಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಮರಾಠಿ ಜನರಿರುವ ಪ್ರದೇಶಗಳು ಮತ್ತು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆ ಮಹಾರಾಷ್ಟ್ರದಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.