ಚಲನಚಿತ್ರ ನಟ ಶಿವರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿ ಜಯಕುಮಾರ್(19) ಗುರುವಾರ ಕಿಡ್ನಿ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದಾನೆ.
ಮೈಸೂರು (ಮೇ.05: ಚಲನಚಿತ್ರ ನಟ ಶಿವರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿ ಜಯಕುಮಾರ್(19) ಗುರುವಾರ ಕಿಡ್ನಿ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದಾನೆ.
ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಸಾವಿಗೂ ಮುನ್ನ ನೆಚ್ಚಿನ ನಟ ಶಿವರಾಜ್ ಕುಮಾರ್ ಅವರನ್ನೊಮ್ಮೆ ನೋಡಬೇಕು ಎಂದು ಹಂಬಲ ವ್ಯಕ್ತಪಡಿಸಿದ್ದ. ಅದರಂತೆ ಮಾ.೮ರಂದು ಶಿವರಾಜ್ ಕುಮಾರ್ ಅವರು ವಿಶೇಷ ಆ್ಯಂಬುಲೆನ್ಸ್ ಮೂಲಕ ಈತನನ್ನು ಬೆಂಗಳೂರಿಗೆ ಕರೆಸಿಕೊಂಡು ಆತ್ಮೀಯವಾಗಿ ಮಾತನಾಡಿಸಿದ್ದರು.
ಮೂಲತಃ ಎಚ್.ಡಿ. ಕೋಟೆ ತಾಲೂಕಿನ ಆಲನಹಳ್ಳಿಯ ಜಯಕುಮಾರ್ ಐದು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಈಚೆಗೆ ಈತನ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಈ ವೇಳೆ ಜೀವನದಲ್ಲಿ ಒಂದು ಬಾರಿಯಾದರೂ ನಟ ಶಿವರಾಜ್ ಕುಮಾರ್ ಅವರನ್ನು ನೋಡಬೇಕು ಎಂದು ಹಂಬಲಿಸಿದ್ದ. ಈತನ ಕಡೆಯಾಸೆಯನ್ನು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಮಾ.೫ರಂದು ವರದಿ ಮಾಡಿದ್ದವು. ಅದರಂತೆ ಮಾ.೮ರಂದು ಶಿವಣ್ಣ ಅವರು ಈ ಅಭಿಮಾನಿಯನ್ನು ಬೆಂಗಳೂರಿಗೆ ವಿಶೇಷ ಆ್ಯಂಬುಲೆನ್ಸ್ ಮೂಲಕ ಕರೆಸಿಕೊಂಡು, ಕುಶಲೋಪರಿ ವಿಚಾರಿಸಿದ್ದರು. ಚಿಕಿತ್ಸೆಗೂ ನೆರವಾಗಿದ್ದರು.
ಇದಕ್ಕೂ ಮೊದಲು ಜಯಕುಮಾರ್‌ನ ಆಸೆಯಂತೆ ಸಂಸದ ಆರ್.ಧ್ರುವನಾರಾಯಣ್ ಅವರೂ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆಗೂ ನೆರವು ನೀಡಿದ್ದರು.
ಅಪ್ಪಟ ಅಭಿಮಾನಿ: ಐದನೇ ತರಗತಿಯಿಂದಲೇ ಶಿವಣ್ಣನ ಚಲನಚಿತ್ರಗಳನ್ನು ನೋಡಲು ಶುರುವಿಟ್ಟುಕೊಂಡಿದ್ದ ಜಯಕುಮಾರ್ ‘ಆನಂದ್’ ಚಿತ್ರದಿಂದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದವರೆಗೂ ಶಿವರಾಜ್ ಕುಮಾರ್ ಅವರನ್ನು ನೋಡಿ ಕಣ್ತುಂಬಿಕೊಂಡಿದ್ದ. ಊಟ ಮಾಡುವಾಗಲೂ ಶಿವಣ್ಣನ ಚಿತ್ರಗಳು, ಪುಸ್ತಕಗಳಲ್ಲೂ ಶಿವಣ್ಣನ ಫೋಟೋ ಹಾಕಿಕೊಂಡು ಖುಷಿ ಪಡುತ್ತಿದ್ದ. ತಾಯಿ ಮಂಜುಳಾ ಅವರ ಅಣ್ಣ ವೆಂಕಟೇಶ್ ಎಂಬವರು ಕೂಡ ಶಿವರಾಜ್‌ಕುಮಾರ್ ಅಭಿಮಾನಿಯಾದ್ದರಿಂದ, ಶಿವಣ್ಣ ಮತ್ತು ವೆಂಕಟೇಶ್ ಇಬ್ಬರೂ ತನ್ನ ಮಾವಂದಿರೇ ಎಂದು ಜಯಕುಮಾರ್ ಕರೆಯುತ್ತಿದ್ದ.