
ಬೆಂಗಳೂರು (ಮೇ.05): ಎತ್ತಿಗೆ ಜ್ವರ ಬಂತೆಂದು ಎಮ್ಮೆಗೆ ಬರೆ ಬಿದ್ದಂತಾಗಿದೆ ಕನ್ನಡ ಚಿತ್ರ ರಸಿಕರ ಈಗಿನ ಸ್ಥಿತಿ. ಚಿತ್ರಮಂದಿರಗಳಲ್ಲಿ ಪ್ರತಿ ಟಿಕೆಟ್‌ಗೆ ಗರಿಷ್ಠ 200 ರೂ. (ತೆರಿಗೆ ಹೊರತುಪಡಿಸಿ) ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳ ಟಿಕೆಟ್ ದರ ದಿಢೀರ್ ದುಬಾರಿಯಾಗಿದೆ. ಸರ್ಕಾರಿ ಆದೇಶದ ಗರಿಷ್ಠ ಲಾಭವೆತ್ತುತ್ತಿರುವ ಮಲ್ಟಿಪ್ಲೆಕ್ಸ್‌ಗಳು ಕನ್ನಡ ಚಿತ್ರದ ದರವನ್ನು ಸದ್ದಿಲ್ಲದೆ ಏರಿಸಿವೆ. ಇದರ ಪರಿಣಾಮವಾಗಿ, ಈ ಹಿಂದೆ 120 ರಿಂದ 150 ರೂ.ಗೆ ಲಭ್ಯವಿದ್ದ ಕನ್ನಡ ಚಿತ್ರಗಳ ಟಿಕೆಟ್ ದರವೀಗ 202 ರೂ ಆಗಿದೆ.
ಇದೇ ವೇಳೆ, ಇತರ ಭಾಷೆಗಳ ಸಿನಿಮಾದ ಟಿಕೆಟ್ ಕೂಡ 200 ರೂ.ಗೆ ದೊರೆಯುತ್ತಿಲ್ಲ. ಮನರಂಜನಾ ತೆರಿಗೆ ಸೇರಿ ಟಿಕೆಟ್ ಬೆಲೆ 264 ರೂ ಆಗಿದೆ. ಅಷ್ಟೇ ಅಲ್ಲ, ಬುಕ್‌ಮೈಶೋದಲ್ಲಿ ಟಿಕೆಟ್ ಬುಕ್ ಮಾಡಿದರೆ 35 ರೂ. ಸೇವಾ ಶುಲ್ಕ ತೆರಬೇಕಿರುವುದರಿಂದ ಒಂದು ಟಿಕೆಟ್‌ನ ಬೆಲೆ 300 ರು. ಆಗುತ್ತಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಪ್ರದರ್ಶಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಟಿಕೆಟ್ ದರ 200 ರೂ. ದಾಟುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಮಲ್ಟಿಪ್ಲೆಕ್ಸ್‌ಗಳು ಅದಕ್ಕೆ ಸಡ್ಡು ಹೊಡೆದಿದ್ದು, ಕನ್ನಡ ಸಿನಿಮಾಗಳ ಪ್ರವೇಶ ದರವನ್ನು ಯಾವುದೇ ಸುಳಿವು ನೀಡದೆ ಏರಿಕೆ ಮಾಡಿವೆ. ಮುಂಚೆ 120-150 ರೂಗೆ ಸಿಗುತ್ತಿದ್ದ ಕನ್ನಡ ಸಿನಿಮಾಗಳ ಟಿಕೆಟ್‌ಗಳಿಗೆ ಈಗ ಪ್ರೇಕ್ಷಕರು 202 ರೂ ತೆರಬೇಕಿದೆ. ರಾಜಕುಮಾರ ಚಿತ್ರದ ಪ್ರವೇಶ ದರ ಶುಕ್ರವಾರದಿಂದಲೇ 200 ರೂ ದಾಟಿದೆ. ಅದರೊಂದಿಗೆ ಪರಭಾಷಾ ಚಿತ್ರಗಳು ಹಾಗೂ ಕನ್ನಡ ಚಿತ್ರಗಳ ನಡುವೆ ನೇರ ಪೈಪೋಟಿ ಆರಂಭವಾಗಿದೆ.
‘ಸರ್ಕಾರದ ಆದೇಶ ಹೊರಬರುವ ಮೊದಲು ಕನ್ನಡ ಸಿನಿಮಾಗಳ ಪ್ರವೇಶ ದರ ಕಡಿಮೆ ಇತ್ತು. ಅದರಿಂದ ಪ್ರೇಕ್ಷಕರಿಗೆ ಮತ್ತು ಕನ್ನಡ ಸಿನಿಮಾಗಳಿಗೆ ಅನುಕೂಲ ಆಗುತ್ತಿತ್ತು. ಈಗ ಟಿಕೆಟ್‌ಗಳು ದುಬಾರಿಯಾಗಿವೆ’ ಎಂದು ಹಿರಿಯ ನಿರ್ಮಾಪಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
200 ರೂ.ದಲ್ಲಿ ತೆರಿಗೆ ಸೇರಿಲ್ಲ:
ಸಿನಿಮಾ ಟಿಕೆಟ್‌ಗೆ 200 ರೂ ಮಿತಿ ನಿಗದಿಪಡಿಸುವುದಾಗಿ ಸರ್ಕಾರ ಘೋಷಿಸಿದಾಗ ಜನರು ಸಂತೋಷಪಟ್ಟಿದ್ದರು. ಅದರಲ್ಲಿ ತೆರಿಗೆ, ಶುಲ್ಕ ಇತ್ಯಾದಿ ಎಲ್ಲ ವೆಚ್ಚಗಳೂ ಸೇರಿರುತ್ತವೆ ಎಂಬುದು ಜನರ ನಿರೀಕ್ಷೆಯಾಗಿತ್ತು. ಆದರೆ, ಮುಖ್ಯಮಂತ್ರಿಗಳ ಬಜೆಟ್ ಘೋಷಣೆಯು ಆದೇಶವಾಗಿ ಜಾರಿಗೆ ಬರುವ ಹೊತ್ತಿಗೆ ‘ಮನರಂಜನಾ ತೆರಿಗೆ ಹೊರತುಪಡಿಸಿದಂತೆ’ ಎಂಬ ತಿದ್ದುಪಡಿಯೊಂದಿಗೆ ಬಂದಿದೆ. ಇದರಿಂದಾಗಿ ಪ್ರವೇಶ ದರ ₹264 ಕ್ಕೆ ಏರಿದೆ. ಇದರ ಜೊತೆಗೇ ಬುಕ್‌ಮೈಶೋ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಿದರೆ 35 ರೂ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲಿಗೆ ಟಿಕೆಟ್ ಬೆಲೆ ₹299 ಆಗುತ್ತದೆ.
ಇನ್ನು, ಸರ್ಕಾರದ ಆದೇಶದ ಪ್ರಕಾರ ಪ್ರತಿ ಚಿತ್ರಮಂದಿರದಲ್ಲಿ ಶೇ.10 ರಷ್ಟು ಆಸನಗಳನ್ನು ಗೋಲ್ಡ್ ಕ್ಲಾಸ್ ಎಂದು ಗುರುತಿಸಬಹುದು. ಗೋಲ್ಡ್ ಕ್ಲಾಸ್ ದರದ ಮೇಲೆ ಯಾವುದೇ ನಿಯಂತ್ರಣ ಸರ್ಕಾರಕ್ಕೆ ಇಲ್ಲ. ಇದರ ಲಾಭ ಪಡೆದುಕೊಳ್ಳುತ್ತಿರುವ ಚಿತ್ರಮಂದಿರಗಳು, ಶೇಕಡಾ ಹತ್ತರಷ್ಟು ಆಸನಗಳನ್ನು ಗೋಲ್ಡ್ ಕ್ಲಾಸ್ ಎಂದು ಪ್ರತ್ಯೇಕಿಸುತ್ತಿವೆ. ಗೋಲ್ಡ್ ಕ್ಲಾಸ್ ಅಂದರೇನು, ಗೋಲ್ಡ್ ಕ್ಲಾಸ್‌ನಲ್ಲಿ ಇರಬೇಕಾದ ಸೌಲಭ್ಯಗಳು ಏನೇನು ಅನ್ನುವುದನ್ನು ಹೊಸ ಆದೇಶದಲ್ಲಿ ಸೂಚಿಸಿಲ್ಲ. ಹೀಗಾಗಿ ಸಣ್ಣಪುಟ್ಟ ಚಿತ್ರಮಂದಿರಗಳು ಕೂಡ ಶೇ.10 ರಷ್ಟು ಆಸನಗಳನ್ನು ಗೋಲ್ಡ್ ಕ್ಲಾಸ್ ಎಂದು ಘೋಷಿಸಿ, ತಮಗಿಷ್ಟ ಬಂದಷ್ಟು ಪ್ರವೇಶ ದರ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.