
ಹುಬ್ಬಳ್ಳಿ[ಮೇ.04]: ಕುಂದಗೋಳ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ 5 ಕೋಟಿಗೆ ಸೇಲಾಗಿದೆ, ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಸಿ.ಎಸ್.ಶಿವಳ್ಳಿ ಪತ್ನಿ ಕುಸುಮಾವತಿ ಬೆಂಬಲಿಗರೊಬ್ಬರು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿಕೊಂಡು ಬಂದಿದ್ದಾರೆಂದು ಕಾಂಗ್ರೆಸ್ ಬಂಡಾಯ ನಾಯಕ ಶಿವಾನಂದ ಬೆಂತೂರ ಆರೋಪಿಸಿದ್ದು, ಈ ಕುರಿತ ವೀಡಿಯೋ ಈಗ ವೈರಲ್ ಆಗಿದೆ. ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶಿವನಾಂದ ಬೆಂತೂರು ಅವರು ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ. ಟಿಕೆಟ್ ಸಿಗದ ಸಿಟ್ಟಿನಿಂದ ಆವೇಶದಿಂದ .5ಕೋಟಿ ನೀಡಿದ್ದರು ಎಂದಿದ್ದೆ. ಕುಸುಮಾವತಿ ಯಾರಿಗೂ ಹಣ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ಆರೋಪ?:
ಕುಂದುಗೋಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಶಿವನಾಂದ ಬೆಂತೂರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬೆಂಬಲಿಗರು ಕೈಕೊಟ್ಟದ್ದು ಹಾಗೂ ವರಿಷ್ಠರ ಒತ್ತಡ ಹೆಚ್ಚಿದ ಕಾರಣ ಕೊನೆಗೆ ಗುರುವಾರವಷ್ಟೇ ನಾಮಪತ್ರ ವಾಪಸ್ ಹಿಂಪಡೆದಿದ್ದರು. ಏತನ್ಮಧ್ಯೆ ಬೆಂಬಲಿಗರನ್ನುದ್ದೇಶಿಸಿ ಅವರು ಬಹಿರಂಗವಾಗಿ ಮಾತನಾಡಿದ್ದು, ಆ ವೇಳೆ ಕುಸುಮಾವತಿ ಶಿವಳ್ಳಿ ಅವರಿಗಾಗಿ ಯಲ್ಲಪ್ಪ ಎಂಬುವವರು .5 ಕೋಟಿ ಕೊಟ್ಟು ಟಿಕೆಟ್ ಖರೀದಿಸಿದ್ದಾರೆ. ಇದರಲ್ಲಿ ಕುಸುಮಾವತಿ ಅವರ ತಪ್ಪಿಲ್ಲ, ಕುಸುಮಾವತಿ ಗೆದ್ದರೆ ಯಲ್ಲಪ್ಪ, ಇತರೆ ಚೇಲಾಗಳೇ ಲೂಟಿ ಹೊಡೆಯುತ್ತಾರೆ. ಹೀಗಾಗಿ ಕುಸುಮಾವತಿ ಸೋಲಿಸಿ ಎಂದು ಕರೆ ನೀಡಿದ್ದರು. ಈ ಕುರಿತ ವೀಡಿಯೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು.
ಕ್ಷಮೆ ಕೋರಿದ ಬೆಂತೂರು: ತಾವು ಮಾಡಿದ್ದ ಆರೋಪದ ವೀಡಿಯೋ ವೈರಲ್ ಆಗುತ್ತಿದ್ದಂತೆ ಬೆಂತೂರು ತಮ್ಮ ಹೇಳಿಕೆ ಕುರಿತು ಶುಕ್ರವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಟಿಕೆಟ್ ಸಿಗದಿದ್ದಕ್ಕೆ ಆವೇಶದಿಂದ .5 ಕೋಟಿ ಕೊಟ್ಟು ಟಿಕೆಟ್ ಖರೀದಿಸಲಾಗಿದೆ ಎಂದಿದ್ದೆ. ಕುಸುಮಾವತಿ ಟಿಕೆಟ್ ಪಡೆಯಲು ಯಾರಿಗೂ, ಯಾವುದೇ ರೀತಿ ಹಣ ನೀಡಿಲ್ಲ. ಈ ಬಗ್ಗೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.