
ಶಿವಮೊಗ್ಗ(ನ.25): ಜಿಲ್ಲಾ ಪೊಲೀಸರ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಕುಖ್ಯಾತ ಅಂತಾರಾಜ್ಯ ದರೋಡೆಕೋರರ ತಂಡವನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು ರು. 40 ಲಕ್ಷ ಮೌಲ್ಯದ ನಗ-ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯ ವಿಶೇಷವೆಂದರೆ ಈ ಬಾರಿ ದರೋಡೆಕೋರರಿಂದ ಆಭರಣ ಖರೀದಿಸಿದ್ದ ಏಳು ಜನರನ್ನು ಸಹ ಬಂಧಿಸಿದ್ದಾರೆ. ಇದೇ ತಂಡದ ಬಾಬುಜಾನ್ ಎಂಬ ಆರೋಪಿಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಂಧಿಸಿ ರು. 15.6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಈಗ ತಂಡದ ಬಹುತೇಕ ಆರೋಪಿಗಳನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ರು. 37.46 ಲಕ್ಷ ಮೌಲ್ಯದ ಆಭರಣಗಳೇ ಇವೆ. ಆದರೆ ಪ್ರಮುಖ ಆರೋಪಿ ಕಡೂರು ಸಾಧಿಕ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಶಿವಮೊಗ್ಗ ಮಂಜುನಾಥ ಬಡಾವಣೆ ಮೂಲದ, ಪ್ರಸ್ತುತ ಚಿಕ್ಕಮಗಳೂರು ನಿವಾಸಿ ಮುಹಿಬುಲ್ಲಾ ಅಲಿಯಾಸ್ ಮುದಾಸಿರ್ (30) ಚಿಕ್ಕಮಗಳೂರು ಜಿಲ್ಲೆ ಗಾಳಿಗುಂಡಿ ಆಲ್ದೂರ್ ಗ್ರಾಮದ ಅಬ್ದುಲ್ ಜಾವಿದ್ ಬಿನ್ ಅಬ್ದುಲ್ ರಹೀಂ (26) ಬೀರೂರು ತಾಲೂಕು ಬಳ್ಳಾರಿ ಕ್ಯಾಂಪ್ ನಿವಾಸಿ ಇಮ್ರಾನ್ ಅಹಮ್ಮದ್ ಅಲಿಯಾಸ್ ಇಮ್ರಾನ್ (31) ಚಿತ್ರದುರ್ಗ ಜಿಲ್ಲೆ ಕುರುಬರ ಹಳ್ಳಿ ನಿವಾಸಿ ಮಹಮ್ಮದ್ ಮಜರುಲ್ಲ (45), ಅದೇ ಗ್ರಾಮದ ಸೈಯದ್ ಸಲೀಂ (37), ಬೆಂಗಳೂರು ನಿವಾಸಿ ಅಹಮ್ಮದ್ ಕಬೀರ್ (32), ಕಡೂರು ತಾಲೂಕು ಹಳ್ಳಿಕೆರೆಯ ತಬರೇಜ್ (37), ಇದೇ ತಾಲೂಕಿನ ನೀಡುಗಟ್ಟ ಗ್ರಾಮದ ಗುಲ್ನಾರ್ ಶಿರಿನ್ ಅಲಿಯಾಸ್ ಕುಂಟಿ ಶಿರಿನ್ ಬಂಧಿತ ಆರೋಪಿಗಳು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ, ಆರೋಪಿ ಸಾಧಿಕ್ ಬೆಂಗಳೂರಿನಲ್ಲಿ ದೊಡ್ಡ ಮನೆಯೊಂದನ್ನು ಬಾಡಿಗೆ ಪಡೆದಿದ್ದ. ಈತ ವೈದ್ಯ ವಿದ್ಯಾರ್ಥಿನಿಯೊಬ್ಬರನ್ನು ಮದುವೆಯಾಗಲೂ ಸಹ ಹೊರಟಿದ್ದ. ಈತನ ಬಂಧನಕ್ಕೆ ಪೊಲೀಸರು ಹುಡುಕುತ್ತಿರುವುದನ್ನು ತಿಳಿದು ಹುಡುಗಿ ಮನೆಯವರು ಎಚ್ಚರಗೊಂಡರು ಎಂದು ತಿಳಿಸಿದರು.
ಹಲವು ಪ್ರಕರಣಗಳು: ಆರೋಪಿಗಳ ವಿರುದ್ಧ ಶಿವಮೊಗ್ಗದ ವಿನೋಬ ನಗರ ಠಾಣೆಯಲ್ಲಿ 5, ದೊಡ್ಡಪೇಟೆ ಠಾಣೆಯಲ್ಲಿ 3, ತುಂಗಾನಗರ ಠಾಣೆಯಲ್ಲಿ 2, ಗ್ರಾಮಾಂತರ ಠಾಣೆಯಲ್ಲಿ 1, ಜಯನಗರ ಠಾಣೆಯಲ್ಲಿ 2, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಠಾಣೆಯಲ್ಲಿ 1, ತುಮಕೂರು ಜಿಲ್ಲೆಯ ತಿಪಟೂರು ಠಾಣೆಯಲ್ಲಿ 3, ಚಿಕ್ಕಮಗಳೂರು ನಗರದಲ್ಲಿ 1, ಹಾಸನ ಜಿಲ್ಲೆಯಲ್ಲಿ 5 ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳು 2015 ರಿಂದ ತಲೆಮರೆಸಿಕೊಂಡಿದ್ದು, ಕಳ್ಳತನ ಮಾಡಿದ್ದ ವಸ್ತುಗಳನ್ನು ಚಿಕ್ಕಮಗಳೂರು, ಆಲ್ದೂರು, ಬೆಂಗಳೂರಿನ ಶಿವಾಜಿ ನಗರ, ಆಂಧ್ರಪ್ರದೇಶದ ಅನಂತಪುರ, ಮುಂಬೈನಲ್ಲಿಯೂ ಮಾರಾಟ ಮಾಡುತ್ತಿದ್ದರು.
ಇತ್ತೀಚೆಗೆ ಕಳವು ಪ್ರಕರಣ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮುತ್ತುರಾಜ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಪಿ.ಎಸ್.ಸುದರ್ಶನ್, ದೊಡ್ಡಪೇಟೆ ಸಿಪಿಐ ಹರೀಶ್ ಕೆ.ಪಟೇಲ್, ಪಿಎಸೈ ಅಭಯ್ ಪ್ರಕಾಶ್ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳು ಎಪಿಎಂಸಿ ಎದುರು ಸಂಶಯಾಸ್ಪದವಾಗಿ ಓಡಾಡುತ್ತಿದ್ದು, ಪೊಲೀಸರನ್ನು ನೋಡಿ ಓಡಿಹೋಗಲು ಯತ್ನಿಸಿದಾಗ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಆಗ ಇವರು ಹಲವೆಡೆ ದಾಖಲಾಗಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಎಂಬುದು ಗೊತ್ತಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.