ಸಂಪುಟ ಸೇರಿದ ಶಂಕರ್‌, ನಾಗೇಶ್‌ಗೆ ಯಾವ ಖಾತೆ?

By Web DeskFirst Published Jun 15, 2019, 7:18 AM IST
Highlights

ಪಕ್ಷೇತರರಾದ ಶಂಕರ್ ಹಾಗೂ ನಾಗೇಶ್ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಿದ್ದಾರೆ.ಇಬ್ಬರಿಗೆ ಖಾಲಿ ಇರುವ ಈ ಎರಡು ಖಾತೆ ನೀಡುವ ಸಾಧ್ಯತೆ ಇದೆ. 

ಬೆಂಗಳೂರು [ಜೂ.15] :  ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವ ಬಗ್ಗೆ ಬೆದರಿಕೆ ಹಾಕಿದ್ದ ಇಬ್ಬರು ಪಕ್ಷೇತರ ಶಾಸಕರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂತ್ರಿ ಮಂಡಲದಲ್ಲಿ ಸ್ಥಾನ ಲಭಿಸಿದ್ದು, ಶಾಸಕರಾದ ಆರ್‌.ಶಂಕರ್‌ ಮತ್ತು ಎಚ್‌.ನಾಗೇಶ್‌ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಪಕ್ಷೇತರರೂ ಕೈಜೋಡಿಸಬಹುದು ಎಂಬ ಆತಂಕದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಸರ್ಕಾರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಕ್ಷೇತರರಿಗೆ ಮಣೆ ಹಾಕಿದ್ದಾರೆ. ಈ ಮೂಲಕ ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳುವ ರಾಜಕೀಯ ತಂತ್ರಗಾರಿಕೆ ಸದ್ಯಕ್ಕೆ ಯಶಸ್ವಿಯಾಗಿದೆ.

ಶುಕ್ರವಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಆರ್‌. ಶಂಕರ್‌ ಮತ್ತು ಎಚ್‌. ನಾಗೇಶ್‌ ಅವರಿಗೆ ಖಾತೆಗಳನ್ನು ಹಂಚಿಕೆ ಮಾಡಿಲ್ಲ. ಆದರೆ, ಶಂಕರ್‌ ಅವರಿಗೆ ಕಾಂಗ್ರೆಸ್‌ ಕೋಟಾದಲ್ಲಿರುವ ಪೌರಾಡಳಿತ ಖಾತೆ ಹಾಗೂ ನಾಗೇಶ್‌ ಅವರಿಗೆ ಜೆಡಿಎಸ್‌ ಕೋಟಾದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆಗಳನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಶನಿವಾರ ಸ್ಪಷ್ಟಚಿತ್ರಣ ಹೊರಬೀಳುವ ಸಾಧ್ಯತೆಯಿದೆ.

click me!