
ಬೆಂಗಳೂರು: ಖಡಕ್ ಎಂದೇ ಹೆಸರಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ದಿಢೀರ್ ಎಂದು ಸಾವನ್ನಪ್ಪಿದ್ದು ಅಧಿಕಾರಿಗಳ ವಲಯದಲ್ಲಿ ತಲ್ಲಣ ಎಬ್ಬಿಸಿತ್ತು. ಅದು ಆತ್ಮಹತ್ಯೆಯೋ...ಕೊಲೆಯೋ ಎಂಬ ಬಗ್ಗೆ ವರ್ಷಗಟ್ಟಲೇ ಸಾರ್ವಜನಿಕವಾಗಿ ಚರ್ಚೆಗಳೂ ನಡೆದಿದ್ವು. ಈ ಚರ್ಚೆಗಳು ಈಗಲೂ ಮುಂದುವರೆದಿರುವ ಹೊತ್ತಲ್ಲೇ ರಾಜ್ಯದ ಮತ್ತೊಬ್ಬ ಯುವ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ದೂರದ ಉತ್ತರ ಪ್ರದೇಶದಲ್ಲಿ ನಿಗೂಢವಾಗಿ ಸಾವಿಗೀಡಾದರು. ಇದು ಕೂಡ ಆತ್ಮಹತ್ಯೆಯಲ್ಲ....ಸಹಜ ಸಾವೂ ಅಲ್ಲ.....ಇದೊಂದು ಕೊಲೆ ಎಂದು ಅವರ ಕುಟುಂಬದ ಸದಸ್ಯರು ನೀಡಿದ ದೂರಿನ ಮೇರೆಗೆ ಅಲ್ಲಿನ ಸರ್ಕಾರ ಕೊಲೆ ಪ್ರಕರಣ ಎಂದೇ ಎಫ್ಐಆರ್ ದಾಖಲಿಸಿದೆ.
ತಿವಾರಿ ಸಾವಿಗೀಡಾದ ಮೂರ್ನಾಲ್ಕು ದಿನದಲ್ಲೇ ಅಕ್ಕಿ ಹಗರಣ, ಕೊಮ್ಯಾಟ್ ಹಗರಣದ ಸುದ್ದಿಯೂ ಸದ್ದು ಮಾಡಿತು. ತಿವಾರಿ ಅವರಿಗೆ ಹಿರಿಯ ಅಧಿಕಾರಿಗಳ ಒತ್ತಡ ಇತ್ತು. ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳ ಕಿರುಕುಳಕ್ಕೆ ರೋಸಿ ಹೋಗಿದ್ದರು. ಇಂತಹ ಸುದ್ದಿಗಳೂ ಈಗಲೂ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ. ಇದೆಲ್ಲದರ ಮಧ್ಯೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇಂತಹ ಸಾವಿನ ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಿದ್ದಾರೆ.
ಅಧಿಕಾರಿಗಳಿಗೆ ಬೇಕು ಆಪ್ತ ಸಮಾಲೋಚನೆ:
ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿರುವ ಎಲ್ಲಾ ಹಂತದ ಐಎಎಸ್ ಅಧಿಕಾರಿಗಳಿಗೆ ಒಂದಿಲ್ಲೊಂದು ಒತ್ತಡ ಇದ್ದೇ ಇರುತ್ತೆ. ಅದು ಕಾರ್ಯನಿರ್ವಹಣೆಯ ಒತ್ತಡ ಇರಬಹುದು, ಅಥ್ವಾ ತಮ್ಮ ಮೇಲಿನ ಅಧಿಕಾರಿಗಳ ಒತ್ತಡ ಇರಬಹುದು. ಜತೆಗೆ ಕಿರುಕುಳವನ್ನೂ ಅನುಭವಿಸುತ್ತಿರಬಹುದು. ಇವೆಲ್ಲ ಕಾರಣಗಳಿಂದ ಅಧಿಕಾರಿಗಳ ಆರೋಗ್ಯದಲ್ಲಿ ಏರುಪೇರುಗಳು ಆಗಬಹುದು. ಒಟ್ಟಾರೆ ಈ ಎಲ್ಲದರ ಪರಿಣಾಮ ಈಗ ಸಾವಿನಲ್ಲೇ ಅಂತ್ಯಗೊಳ್ಳುತ್ತಿದೆ. ಹೀಗಾಗಿ ಹಿರಿಯ ಐಎಎಸ್ ಮಹಿಳಾ ಅಧಿಕಾರಿ ಡಾ.ಶಾಲಿನಿ ರಜನೀಶ್ ಅಧಿಕಾರಿಗಳ ಒತ್ತಡ, ಅವರು ಅನುಭವಿಸುತ್ತಿರುವ ಕಿರುಕುಳ ಸೇರಿದಂತೆ ಇನ್ನಿತರೆ ಕಾರಣಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಅಧಿಕಾರಿಗಳಿಗೆ ಆಪ್ತ ಸಮಾಲೋಚನೆ ಬೇಕು ಎಂದು ಸರ್ಕಾರಕ್ಕೆ ಪತ್ರ ಮುಖೇನ ಸಲಹೆ ನೀಡಿದ್ದಾರೆ.
ಮನಶಾಸ್ತ್ರದಲ್ಲಿ ಪದವಿ ಪಡೆದಿರುವ ಡಾ.ಶಾಲಿನಿ ರಜನೀಶ್, ತಾನು ಅಧಿಕಾರಿಗಳಿಗೆ ಆಪ್ತ ಸಮಾಲೋಚನೆ ನಡೆಸಲು ಸಿದ್ಧ. ಇದಕ್ಕೆ ಸರ್ಕಾರ ಅನುವು ಮಾಡಿಕೊಡ್ಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಒತ್ತಡ, ಕಿರುಕುಳದಿಂದ ಬೇಸತ್ತಿರುವ... ರೋಸಿ ಹೋಗಿರುವ ಅಧಿಕಾರಿಗಳ ಹೆಸರನ್ನು ಗೌಪ್ಯವಾಗಿಟ್ಟು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸುತ್ತೇನೆ. ಇದಕ್ಕೆ ಅವಕಾಶ ನೀಡಿದಲ್ಲಿ ಯುವ ಉತ್ಸಾಹಿ ಐಎಎಸ್ ಅಧಿಕಾರಿಗಳು ಕಡಿಮೆ ವಯಸ್ಸಲ್ಲಿ ಸಾವಿಗೀಡಾಗುವುದನ್ನು ತಡೆಗಟ್ಟಬಹುದು. ಇದಕ್ಕೆ ಸರ್ಕಾರ ಅನುಮತಿ ನೀಡ್ಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಸುವರ್ಣನ್ಯೂಸ್'ಗೆ ತಿಳಿಸಿವೆ.
ಡಾ.ಶಾಲಿನಿ ರಜನೀಶ್ ಅವರು ಬರೆದಿರುವ ಪತ್ರಕ್ಕೆ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿ ಇನ್ನೂ ಯಾವ್ದೇ ಉತ್ತರವನ್ನು ನೀಡಿಲ್ಲ. ಇವರು ನೀಡಿರುವ ಆಫರ್'ನ್ನು ಸರ್ಕಾರ ಒಪ್ಪಿಕೊಳ್ಳುತ್ತಾ ಅನ್ನೋದನ್ನು ಕಾದು ನೋಡ್ಬೇಕು.
- ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.