
ಬೆಂಗಳೂರು[ಮೇ.11]: ಪುಸ್ತಕ ಕೇಳಲು ಹೋದ ಯುವತಿ ಬಳಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ರಾಜ್ಯ ಗ್ರಂಥಾಲಯ ಇಲಾಖೆ ನಿರ್ದೇಶಕರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯೊಬ್ಬರು ‘ಲೈಂಗಿಕ ದೌರ್ಜನ್ಯ’ ದೂರು ದಾಖಲಿಸಿದ್ದಾರೆ.
19 ವರ್ಷದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಅವರ ವಿರುದ್ಧ ‘ಲೈಂಗಿಕ ದೌರ್ಜನ್ಯ’ ಪ್ರಕರಣದಡಿ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಹೊಸಮನಿ ಅವರು ವಿದ್ಯಾರ್ಥಿನಿ ವಿರುದ್ಧ ಹಣಕ್ಕೆ ಬೇಡಿಕೆ ಇಟ್ಟು, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಹಾಗೂ ಆಕೆಯ ತಾಯಿ ವಿರುದ್ಧ ದೂರು ನೀಡಿದ್ದಾರೆ. ಪರಸ್ಪರ ದೂರು, ಪ್ರತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದರು.
ನಗರದ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯು ಕಾಡುಗೋಡಿಯಲ್ಲಿ ನೆಲೆಸಿದ್ದಾರೆ. ಸಂತ್ರಸ್ತೆಯ ತಾಯಿ ದಲಿತ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ. ಡಾ.ಬಿ.ಅಂಬೇಡ್ಕರ್ ಅವರ ಜಯಂತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ತಾಯಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದರು. ಕಾರ್ಯಕ್ರಮಕ್ಕೆ ಬರುವವರಿಗೆ ಅಂಬೇಡ್ಕರ್ ಕುರಿತ ಪುಸ್ತಕ ವಿತರಣೆ ಮಾಡಲು ತೀರ್ಮಾನಿಸಿದ್ದರು.
ವಿದ್ಯಾರ್ಥಿನಿ ಯುವತಿ ತನ್ನ ತಾಯಿ ಪರವಾಗಿ ಪುಸ್ತಕಕ್ಕೆ ಮನವಿ ಮಾಡಲು ವಿಶ್ವೇಶ್ವರಯ್ಯ ಟವರ್‌ನಲ್ಲಿರುವ ಗ್ರಂಥಾಲಯ ಇಲಾಖೆಯ ನಾಲ್ಕನೇ ಮಹಡಿಗೆ ತೆರಳಿದ್ದರು. ಸತೀಶ್ ಹೊಸಮನಿ ಅವರ ಕಚೇರಿಗೆ ತೆರಳಿ ಮನವಿ ಪತ್ರ ನೀಡಿ ಅಂಬೇಡ್ಕರ್ ಕುರಿತ 300 ಪುಸ್ತಕ ಬೇಕಿದೆ ಎಂದು ಅಧಿಕಾರಿಯನ್ನು ಕೇಳಿದ್ದರು. ಅದಕ್ಕೆ ಅಧಿಕಾರಿ ‘500 ಪುಸ್ತಕ ಬೇಕಾದರೂ ಕೊಡುತ್ತೇನೆ. ಆದರೆ ನೀನು ನನ್ನ ಬಳಿ ಒಬ್ಬಳೇ ಬರಬೇಕು’ ಎಂದು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಹೇಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮೇ 5ರಂದು ಮಧ್ಯಾಹ್ನ ಸುಮಾರು 12ರ ಸುಮಾರಿಗೆ ನನ್ನ ಕೊಠಡಿಗೆ ಹುಡುಗಿಯೊಬ್ಬಳು ಪುಸ್ತಕ ಕೇಳುವ ನೆಪದಲ್ಲಿ ಬಂದಿದ್ದಳು. .5 ಲಕ್ಷ ಕೊಡು ಇಲ್ಲದಿದ್ದರೆ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸುತ್ತೇನೆ. ಸರ್ಕಾರಿ ಕೆಲಸದಿಂದ ತೆಗೆದು ಹಾಕಿಸುತ್ತೇನೆಂದು ಬೆದರಿಕೆ ಹಾಕಿದ್ದರು. ತಕ್ಷಣ ಅಲ್ಲಿಗೆ ಅವರ ತಾಯಿ ಹಾಗೂ ಸಂಘಟನೆಯ 10ರಿಂದ 15 ಜನ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಘಟನೆ ಸಂಬಂಧ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಅಧಿಕಾರಿ ಕಚೇರಿಯ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿ ವಿವರಿಸಿದರು. ಈ ಸಂಬಂಧ ಪತ್ರಿಕೆ ಸತೀಶ್ ಕುಮಾರ್ ಹೊಸಮನಿ ಅವರ ಪ್ರತಿಕ್ರಿಯೆಗೆ ಸಂಪರ್ಕಿಸಿದಾಗ ಮೊಬೈಲ್ ಸ್ವಿಚ್‌ಆಫ್ ಆಗಿರುವುದು ಕಂಡು ಬಂತು.
ಪ್ರಕರಣ ಮುಚ್ಚಿ ಹಾಕುವ ಯತ್ನ ಆರೋಪ
ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದು, ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಅಲ್ಲದೆ, ದೂರು ನೀಡಲು ಹೋದಾಗ ಪ್ರಕರಣ ದಾಖಲಿಸದೆ ಸತಾಯಿಸಿದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತೆ ನಡೆದುಕೊಂಡಿರುವ ಪೊಲೀಸರು ಎಫ್‌ಐಆರ್ ಪ್ರತಿಯಲ್ಲಿ ಅಧಿಕಾರಿಯ ಸೂಕ್ತ ಹುದ್ದೆಯನ್ನು ದಾಖಲಿಸದೇ ಕೇವಲ ಗ್ರಂಥಾಲಯ ಅಧಿಕಾರಿ ಎಂದಷ್ಟೇ ಹೇಳಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.