ಬಜರಂಗದಳ ಕಾರ‌್ಯಕರ್ತರಿಗೆ ತ್ರಿಶೂಲಧಾರಣೆ

By Web DeskFirst Published May 11, 2019, 12:00 PM IST
Highlights

ಹೈಜಂಪ್, ಮಂಕಿರೋಪ್, ಮತ್ತಿತರ ತರಬೇತಿ | 20 ಜಿಲ್ಲೆಯಿಂದ 105 ಕಾರ‌್ಯಕರ್ತರು ಭಾಗಿ

ಚಿತ್ರದುರ್ಗ[ಮೇ.11]: ದೇಶ ಹಾಗೂ ಹಿಂದೂ ಸಮಾಜ ರಕ್ಷಣೆ ಜೊತೆಗೆ ಆತ್ಮರಕ್ಷಣೆ, ವಿಶ್ವಾಸ ವೃದ್ಧಿಸುವ ದೃಷ್ಟಿಯಿಂದ ಬಜರಂಗದಳ ಕಾರ್ಯಕರ್ತರಿಗೆ ಪೊಲೀಸರಿಗೆ ನೀಡುವ ರೀತಿಯಲ್ಲಿ ಕಠಿಣ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಜತೆಗೆ ಆತ್ಮರಕ್ಷಣೆಗೆ ತ್ರಿಶೂಲ ಧಾರಣೆಯನ್ನೂ ಮಾಡಲಾಗಿದೆ. ಚಿತ್ರದುರ್ಗದ ರಾಕ್ ಪೋರ್ಟ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಒಂದು ವಾರಗಳ ಕಾಲ ತರಬೇತಿ ಶಿಬಿರ ನಡೆಯುತ್ತಿದೆ. ದಕ್ಷಿಣ ಕರ್ನಾಟಕದ 20 ಜಿಲ್ಲೆಯ 105 ಜನ ಆಯ್ದ ಬಜರಂಗದಳ ಕಾರ್ಯಕರ್ತರು ಹಾಗೂ ಮುಖಂಡರು ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದಾರೆ.

ತರಬೇತಿ ಶಿಬಿರವು ಕಳೆದ ಮೇ 5ರಿಂದ ಆರಂಭಗೊಂಡಿದ್ದು, ದಿನ ನಿತ್ಯ ಬೆಳಗ್ಗೆ 4.45 ರಿಂದ ರಾತ್ರಿ 10.15ರವರೆಗೆ ಶಾರೀರಿಕ ಸದೃಢತೆಗೆ ವಿವಿಧ ವ್ಯಾಯಾಮದ ಜತೆಗೆ ದೇಶ ಪ್ರೇಮದ ಬಗ್ಗೆಯೂ ತಿಳಿಸಲಾಗುತ್ತದೆ. ನಿತ್ಯ ಬೆಳಗ್ಗೆ ಸುಮಾರು 2 ಗಂಟೆ ಕಾಲ ವ್ಯಾಯಾಮ, ಧ್ಯಾನ, ದಂಡ ಅಭ್ಯಾಸ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆ ಯಾವ ರೀತಿ ಮಾಡಬೇಕು, ಬೆಂಕಿನಂದಿಸುವ ಬಗ್ಗೆ, ಮಂಕಿರೋಪು, ಹೈಜಂಪ್, ಲಾಂಗ್ ಜಂಪ್ ಸೇರಿದಂತೆ ಬಜರಂಗದಳ ಕಾರ್ಯಕರ್ತರು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣೆಗೆ ಸನ್ನದ್ಧರಾಗಲು ತರಬೇತಿ ನೀಡಲಾಗುತ್ತಿದೆ.

ಬೌದ್ಧಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ವಿದ್ಯಮಾನಗಳು, ಪ್ರಸ್ತುತ ದೇಶದ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಲಾಗುತ್ತದೆ ಹಾಗೂ ಯಾವುದೇ ವಿಷಯದಲ್ಲಿ ಮಾತನಾಡುವಾಗ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡು ಮಾತನಾಡುವ ಬಗ್ಗೆ, ಯಾವುದೇ ಅಂಜಿಕೆ ಇಲ್ಲದೇ ಧೈರ್ಯವಾಗಿ ಮಾತನಾಡುವ ಕಲೆ ತಿಳಿಸಿಕೊಡಲಾಗುತ್ತದೆ.

ತ್ರಿಶೂಲಧಾರಣೆ:

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೇರಿದಂತೆ ಬಜರಂಗದಳ ಕಾರ್ಯಕರ್ತರಿಗೆ ಮೇ 10ರಂದು ಆತ್ಮರಕ್ಷಣೆ, ಆತ್ಮ ವಿಶ್ವಾಸ ಹೆಚ್ಚಿಸಲು ತ್ರಿಶೂಲಧಾರಣೆ ಮಾಡಲಾಗಿದೆ. ದೇವಾನುದೇವತೆಗಳು ಆಯುಧಗಳನ್ನು ಇಟ್ಟುಕೊಂಡಿರುವ ಬಗ್ಗೆ ತಿಳಿಸಿ, ಅದೇ ರೀತಿಯಲ್ಲಿಯೇ ಬಜರಂಗದಳದ ಕಾರ್ಯಕರ್ತರೂ ಬಲಿದಾನ ಮಾಡಿಯಾದರೂ ಹಿಂದು ಸಮಾಜ ಹಾಗೂ ಹಿಂದುಗಳ ಉಳಿವಿಗೆ ಕಾರಣಿಭೂತರಾಗಬೇಕು ಎನ್ನುವ ಸಂಕಲ್ಪದೊಂದಿಗೆ ವಿಶೇಷ ಗಣಹೋಮ ಮಾಡಿ ನಂತರ ತ್ರಿಶೂಲಧಾರಣೆ ಮಾಡಲಾಗಿದೆ.

click me!