ತಮಿಳುನಾಡು ದೇಗುಲವೊಂದರಲ್ಲಿ ದೇಗುಲದ ಹುಂಡಿ ಹಣ ಹಂಚುವ ವೇಳೆ ಕಾಲ್ತುಳಿತದಿಂದಾಗಿ 7 ಭಕ್ತಾಧಿಗಳು ದುರ್ಮರಣ ಹೊಂದಿದ್ದಾರೆ
ತಿರುಚನಾಪಳ್ಳಿ[ಏ.22]: ರ್ಮಿಕ ಪೂಜಾ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿಗೆ ಸಿಲುಕಿ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಏಳು ಭಕ್ತರು ಸಾವನ್ನಪ್ಪಿದ ಘಟನೆ ಭಾನುವಾರ ತಿರುಚನಾಪಳ್ಳಿ ಜಿಲ್ಲೆಯ ತುರೈಯೂರಿನಲ್ಲಿ ಜರುಗಿದೆ.
ಚೈತ್ರ (ಚಿತ್ರ) ಪೂರ್ಣಿಮೆ ಅಂಗವಾಗಿ ತುರೈಯೂರಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಸ್ಥಾನದ ಹುಂಡಿಗೆ ಬಂದ ಹಣದಲ್ಲಿನ ನಾಣ್ಯಗಳನ್ನು (ಪದಿ ಕಾಸು) ದೇವಸ್ಥಾನದ ಅರ್ಚಕರು ಭಕ್ತರಿಗೆ ಹಂಚುವ ಸಂಪ್ರದಾಯವಿದೆ. ಇದನ್ನು ಮನೆಯಲ್ಲಿಟ್ಟರೆ ಐಶ್ವರ್ಯ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ನಾಣ್ಯಗಳನ್ನು ಪಡೆಯಲು ಭಕ್ತರು ಒಂದೇ ಬಾರಿಗೆ ಮುಗಿಬಿದ್ದು ನೂಕಾಟ ನಡೆದು ಏಳು ಜನರ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಿತರ ಗಾಯಾಳುಗಳನ್ನು ತುರೈಯೂರು ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದುರ್ಘಟನೆ ಕುರಿತು ತನಿಖೆ ಆರಂಭಗೊಂಡಿದೆ.