ರಾಮುಲು, ಪುತ್ರ ಜೆಡಿಎಸ್'ಗೆ ಫೆ.17 ರಂದು ಸೇರ್ಪಡೆ

By Suvarna Web deskFirst Published Feb 6, 2018, 10:40 AM IST
Highlights

ಇದೇ ತಿಂಗಳ 17ರಂದು ಬೆಂಗಳೂರಿನಲ್ಲಿ ಅಥವಾಕೊಪ್ಪಳದಲ್ಲಿ ಸಮಾವೇಶ ನಡೆಸುವ ಸಂಭವವಿದ್ದು, ಆ ದಿನವೇ ಉಭಯ ಮುಖಂಡರುಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.

ಬೆಂಗಳೂರು(ಫೆ.06): ಒಂದು ಕಾಲದಲ್ಲಿ ಹೈದ್ರಾಬಾದ್ ಕರ್ನಾಟಕದ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಭಾಗದಲ್ಲಿ ‘ಧಣಿ’ ಎಂದೇ ಕರೆಯಲ್ಪಡುತ್ತಿದ್ದ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಲೋಕಸಭೆಯ ಮಾಜಿ ಸದಸ್ಯ ಎಚ್.ಜಿ.ರಾಮುಲು ಮತ್ತ ವರ ಪುತ್ರ ವಿಧಾನಪರಿಷತ್ತಿನ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಅವರನ್ನು ಸೆಳೆಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.

ಇದೇ ತಿಂಗಳ 17ರಂದು ಬೆಂಗಳೂರಿನಲ್ಲಿ ಅಥವಾ ಕೊಪ್ಪಳದಲ್ಲಿ ಸಮಾವೇಶ ನಡೆಸುವ ಸಂಭವವಿದ್ದು, ಆ ದಿನವೇ ಉಭಯ ಮುಖಂಡರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಶ್ರೀನಾಥ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ನಗರದ ಡಾಲರ್ಸ್ ಕಾಲೋನಿಯಲ್ಲಿರುವ ರಾಮುಲು ನಿವಾಸಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಿದರು. ಮೊದಲು ಬೆಳಗ್ಗೆ ದೇವೇಗೌಡರು ರಾಮುಲು ಅವರನ್ನು ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮುಲು ಅವರ ಪುತ್ರ ಶ್ರೀನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲವಕುಶರಂತಿದ್ದು, ಮುಂದಿನ ದಿನದಲ್ಲಿ ಜತೆಯಲ್ಲಿ ಕೆಲಸ ಮಾಡಲಿದ್ದಾರೆ ಎಂದರು.

click me!