ಹೊಸ ವರ್ಷಾಚರಣೆ: ಅಹಿತಕರ ಘಟನೆ ತಡೆಗೆ ಖಾಕಿ ಅಲರ್ಟ್‌

Published : Dec 26, 2018, 08:58 AM IST
ಹೊಸ ವರ್ಷಾಚರಣೆ: ಅಹಿತಕರ ಘಟನೆ ತಡೆಗೆ ಖಾಕಿ ಅಲರ್ಟ್‌

ಸಾರಾಂಶ

ಹೊಸ ವರ್ಷವನ್ನು ಸ್ವಾಗತಿಸಲು ನಗರ ಸಜ್ಜಾಗುತ್ತಿದೆ. ಇದೇ ವೇಳೆಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.

ಬೆಂಗಳೂರು :  ನೂತನ ಸಂವತ್ಸರವನ್ನು ಸ್ವಾಗತಿಸಲು ರಾಜಧಾನಿಯು ಸಿಂಗಾರಗೊಳ್ಳುತ್ತಿದ್ದು, ನಾಗರಿಕರ ಸಂಭ್ರಮಾಚರಣೆ ಮೇಲೆ ಯಾವುದೇ ರೀತಿಯ ಕರಿನೆರಳು ಬೀಳದಂತೆ ತಡೆಯಲು ಪೊಲೀಸರು ಸಹ ಸಜ್ಜಾಗುತ್ತಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಆದ್ಯತೆ ಕೊಟ್ಟಿರುವ ಪೊಲೀಸರು, ಒತ್ತಾಯಪೂರ್ವಕವಾಗಿ ಶುಭಾಶಯ ಕೋರಿ ದುಂಡಾವರ್ತನೆ ತೋರುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡುವುದಾಗಿ ಸಹ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆ ವೇಳೆ ಬಂದೋಬಸ್‌್ತ ಸಂಬಂಧ ನಾಲ್ಕೈದು ದಿನಗಳಿಂದ ನಿರಂತರವಾಗಿ ಹಿರಿಯ ಅಧಿಕಾರಿಗಳ ಜತೆ ಸಮಾಲೋಚಿಸಿರುವ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರು, ಡಿ.31ರಂದು ರಾತ್ರಿ ನಗರದ ಭದ್ರತೆ ಕುರಿತು ನೀಲ ನಕ್ಷೆ ಸಿದ್ಧಪಡಿಸಿದ್ದಾರೆ. ಏನಾದರೂ ಅಹಿತಕರ ಘಟನೆಗಳು ನಡೆದರೆ ಸಂಬಂಧಪಟ್ಟಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಭೆಯಲ್ಲಿ ಆಯುಕ್ತರು ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಡಿಸೆಂಬರ್‌ 31ರಂದು ರಾತ್ರಿ ಕಾನ್‌ಸ್ಟೇಬಲ್‌ಗಳೂ ಸೇರಿದಂತೆ ನಾಲ್ವರು ಹೆಚ್ಚುವರಿ ಆಯುಕ್ತರು, 19 ಡಿಸಿಪಿಗಳು ಸೇರಿದಂತೆ ಸರಿ ಸುಮಾರು 15 ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆಯಲ್ಲಿ ನಿರತರಾಗಲಿದ್ದಾರೆ. ಹಾಗೆ ನಗರ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಸಹ ಬಳಕೆಯಾಗಲಿವೆ.

ಇನ್ನು ಈ ಸಂಭ್ರಮಾಚರಣೆಗೆ ಕೇಂದ್ರ ಬಿಂದುವಾದ ಎಂ.ಜಿ.ರಸ್ತೆ, ಬ್ರಿಗೇಡ್‌ ಹಾಗೂ ಚಚ್‌ರ್‍ ಸ್ಟ್ರೀಟ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟು, ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಬಿ.ಕೆ.ಸಿಂಗ್‌ ನೇತೃತ್ವದಲ್ಲಿ 500 ಮಹಿಳಾ ಸಿಬ್ಬಂದಿ ಸೇರಿ 2 ಸಾವಿರ ಪೊಲೀಸರನ್ನು ನಿಯೋಜನೆಗೊಳ್ಳಲಿದ್ದಾರೆ. ಹಾಗೆ 300ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ನಾಲ್ಕು ಕಾವಲು ಗೋಪುರ (ವಾಚ್‌ ಟವರ್‌)ಗಳನ್ನು ನಿರ್ಮಿಸಿ ಸಹ ಪ್ರತಿಯೊಬ್ಬರ ಚಲನವಲನವನ್ನು ನಿಗಾವಹಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

800 ಪೊಲೀಸ್‌ ವಾಹನ ಪಹರೆ

ಡಿಸೆಂಬರ್‌ ತಿಂಗಳ ಕೊನೆ ದಿನ ನಗರ ವ್ಯಾಪ್ತಿ 500 ಹೊಯ್ಸಳ ಹಾಗೂ 300 ಚೀತಾ ಸೇರಿ ಒಟ್ಟು 800 ವಾಹನಗಳಲ್ಲಿ ಪೊಲೀಸರ ಗಸ್ತು ತಿರುಗಲಿದ್ದಾರೆ. ಅಹಿತಕರ ಘಟನೆಗಳು ಸಂಭವಿಸಿದರೆ ತಕ್ಷಣವೇ ಪೊಲೀಸರು ಸ್ಪಂದಿಸಲಿದ್ದಾರೆ. ಅಲ್ಲದೆ, ನಮ್ಮ-100 (ಪೊಲೀಸ್‌ ನಿಯಂತ್ರಣ ಕೊಠಡಿ) ವಿಭಾಗದ ಸಿಬ್ಬಂದಿ ಸಹ ಅಲರ್ಟ್‌ ಆಗಿರುತ್ತಾರೆ.

ಫ್ಲೈ ಓವರ್‌, ಎಂಜಿ ರಸ್ತೆ ಪ್ರವೇಶ ನಿಷೇಧ

ನಗರದ ಎಲ್ಲಾ ಮೇಲ್ಸೇತುವೆಗಳು ಹಾಗೂ ಎಂ.ಜಿ.ರಸ್ತೆ ವ್ಯಾಪ್ತಿ ಡಿಸೆಂಬರ್‌ 31ರ ಮಧ್ಯಾಹ್ನ 3ರಿಂದ ಜನವರಿ 1ರ ಬೆಳಗ್ಗೆ 6ರವರೆಗೆ ವಾಹನ ಸಂಚಾರವನ್ನು ಪೊಲೀಸರು ನಿಷೇಧಿಸಲಿದ್ದಾರೆ.

ಸಂಭ್ರಮಾಚರಣೆ ಮತ್ತಿನಲ್ಲಿ ಕೆಲವರು ಮದ್ಯ ಸೇವಿಸಿ ವಾಹನ ಚಲಾಯಿಸಬಹುದು. ಇದರಿಂದ ಮೇಲ್ಸೇತುವೆಗಳಲ್ಲಿ ಅಪಘಾತಕ್ಕೂ ಕಾರಣವಾಗಲಿದೆ. ಇನ್ನು ಕೆಲವು ಕಿಡಿಗೇಡಿಗಳು ಆಚರಣೆ ನೆಪದಲ್ಲಿ ಪಾನಮತ್ತರಾಗಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ನಾಗರಿಕರಿಗೆ ತೊಂದರೆ ಉಂಟು ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮೈಸೂರು ರಸ್ತೆ, ಹೊಸೂರು, ಯಶವಂತಪುರ, ರಿಚ್‌ಮಂಡ್‌ ಸರ್ಕಲ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಪ್ರಮುಖ ಮೇಲ್ಸೇತುವೆಗಳ ಮೇಲೆ ವಾಹನಗಳ ಸಂಚಾರ ಬಂದ್‌ ಆಗಲಿದೆ. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರುವ ಪ್ರಯಾಣಿಕರಿಗೆ ಆಡಚಣೆಯಾಗದಂತೆ ಪೊಲೀಸರು ವ್ಯವಸ್ಥೆ ಕಲ್ಪಿಸಲಿದ್ದಾರೆ. ಇನ್ನು ಸಂಭ್ರಮಾಚರಣೆ ನಡೆಯುವ ಕಾರಣಕ್ಕೆ ಎಂ.ಜಿ.ರಸ್ತೆ, ಬ್ರಿಗೇಡ್‌ ಹಾಗೂ ಚಚ್‌ರ್‍ ಸ್ಟ್ರೀಟ್‌ಗಳಿಗೆ ವಾಹನಗಳ ಓಡಾಟಕ್ಕೆ ಬ್ರೇಕ್‌ ಬೀಳಲಿದೆ.

ಹೊಸ ವರ್ಷಾಚರಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಹಿಂದಿನ ವರ್ಷದ ಭದ್ರತಾ ವ್ಯವಸ್ಥೆಯನ್ನೇ ಈ ವರ್ಷವು ಮುಂದುವರೆಯಲಿದ್ದು, ಇದರಲ್ಲಿ ಕೆಲವು ಬದಲಾವಣೆಗಳಾಗಲಿವೆ. ಈ ಬಂದೋಬಸ್‌್ತ ಕುರಿತು ಇನ್ನೆರೆಡು ದಿನಗಳಲ್ಲಿ ಆಯುಕ್ತರು ಸವಿಸ್ತಾರವಾಗಿ ಮಾಹಿತಿ ನೀಡಲಿದ್ದಾರೆ.

ಸೀಮಂತ್‌ ಕುಮಾರ್‌ ಸಿಂಗ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ, ಪೂರ್ವ ವಿಭಾಗ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?