ಉಕ್ಕಿನ ಮೇಲ್ಸೇತುವೆ ಬಗ್ಗೆ ಗೌಪ್ಯತೆಯೇ ಕೋರ್ಟ್‌ ಮೆಟ್ಟಿಲೇರಲು ಕಾರಣ

Published : Oct 12, 2016, 03:11 AM ISTUpdated : Apr 11, 2018, 12:45 PM IST
ಉಕ್ಕಿನ ಮೇಲ್ಸೇತುವೆ ಬಗ್ಗೆ ಗೌಪ್ಯತೆಯೇ ಕೋರ್ಟ್‌ ಮೆಟ್ಟಿಲೇರಲು ಕಾರಣ

ಸಾರಾಂಶ

ಭಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಉಕ್ಕಿನ ಸೇತುವೆ ಬಗ್ಗೆ ಯಾರೊಂದಿಗೂ ಚರ್ಚೆ ಮಾಡಿಲ್ಲ ಸರ್ಕಾರ | ಸಾರ್ವಜನಿಕರಿಗೂ ಯೋಜನೆ ಬಗ್ಗೆ ಇಲ್ಲ ಮಾಹಿತಿ | ಸೇತುವೆ ಬಗ್ಗೆ ನಮ್ಮ ಬೆಂಗಳೂರು ಪ್ರತಿಷ್ಠಾನ ಆರ್‌ಟಿಐ ಅಡಿ ಮಾಹಿತಿ ಕೇಳಿದರೂ ಇಲ್ಲ ಪ್ರತಿಕ್ರಿಯೆ | ಯೋಜನೆಯಿಂದ ಪರಿಸರಕ್ಕೂ ಹಾನಿ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗುತ್ತಿರುವ ಯೋಜನೆಯ ಬಗ್ಗೆ ಸಾರ್ವಜನಿಕರಿಗೇ ಮಾಹಿತಿ ನೀಡದಿರುವುದು, ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಬಯಸಿದರೂ ಸರ್ಕಾರ ಈ ವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲದಿರುವುದಕ್ಕೆ ನಮ್ಮ ಬೆಂಗಳೂರು ಪ್ರತಿಷ್ಠಾನದ ಸಿಇಒ ಶ್ರೀಧರ್‌ ಪಬ್ಬಿಸೆಟ್ಟಿಆಕ್ಷೇಪ

ಬೆಂಗಳೂರು (ಅ.12): ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದ​ವರೆಗೆ ಬಿಡಿಎ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾ​ಣದ ಕುರಿತು ಸಾರ್ವಜನಿಕರಿಗೆ ಮಹತ್ವದ ದಾಖಲೆಗಳನ್ನು ನೀಡದೇ ಸಂಶಯಕ್ಕೆ ಕಾರಣವಾಗಿ​ರುವುದು ನ್ಯಾಯಾಲ​ಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖ​ಲಿಸಲು ಕಾರಣವಾಗಿದೆ.

6.7 ಕಿ.ಮೀ. ಉದ್ದದ ರೂ.1761 ಕೋಟಿ ಅಂದಾಜು ವೆಚ್ಚದ ಯೋಜನೆ ಬೆಂಗಳೂರು ಜನತೆ ಪಾಲಿಗೆ ದುಸ್ವಪ್ನವಾಗಿದೆ ಎಂದು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿರುವ ನಮ್ಮ ಬೆಂಗಳೂರು ಪ್ರತಿಷ್ಠಾನದ ಸಿಇಒ ಶ್ರೀಧರ್‌ ಪಬ್ಬಿಸೆಟ್ಟಿಹೇಳಿದ್ದಾರೆ.

ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ವರದಿ, ಯೋಜನೆ ಅನುಷ್ಠಾನದ ಕಾರ್ಯ ಸಾಧ್ಯತೆ, ವಿವರವಾದ ಯೋಜನಾ ವರದಿ ಜತೆಗೆ ಯೋಜನೆ ಅನುಷ್ಠಾನದಿಂದಾಗಿ ಪ್ರಮುಖವಾದ ಪಾರಂಪರಿಕ ಕಟ್ಟಡಗಳ ಮೇಲಾಗುವ ಪರಿಣಾಮಗಳ ಕುರಿತು ನಾಗರಿಕರಿಗಿರಲಿ, ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ)ಗೂ ಮಾಹಿತಿ ನೀಡುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಹಾಕಿರುವ ಅರ್ಜಿಗಳಿಗೂ ಸೂಕ್ತ ಮಾಹಿತಿ ಸಿಗದೇ ಇರುವುದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವುದು ಪ್ರತಿಷ್ಠಾನಕ್ಕೆ ಅನಿವಾರ್ಯವಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸುತ್ತಿರುವ ಉಕ್ಕಿನ ಸೇತುವೆ ಬಗ್ಗೆ ನಾಗರಿಕರಿಗೇ ಮಾಹಿತಿ ನೀಡದ್ದರಿಂದ ಯೋಜನೆ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಯೋಜನೆ ಕುರಿತು ಹಲವು ಪ್ರಶ್ನೆಗಳು ಕಾಡುತ್ತಿವೆ. ನಮ್ಮ ಬೆಂಗಳೂರು ಪ್ರತಿಷ್ಠಾನ ಹೈಕೋರ್ಟ್‌ಗೆ ದಾಖಲಿಸಿರುವ ದಾವೆಗೆ, ಆರು ವಾರಗಳಲ್ಲಿ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು ಯೋಜನೆ ಹೈಕೋರ್ಟ್‌ ನೀಡುವ ಆದೇಶಕ್ಕೆ ಅನುಗುಣವಾಗಿರುವುದಾಗಿ ಸ್ಪಷ್ಟಪಡಿಸಿದೆ.

ಯೋಜನೆಯ ಅನಿವಾರ್ಯತೆ ಕುರಿತು ಮಾಹಿತಿ ಮತ್ತು ಪರಿಸರಕ್ಕೆ ನೀಡಿರುವ ಮಹತ್ವ, ಕಾರ್ಯಸಾಧನಾ ವರದಿ, ಯೋಜನಾ ವರದಿ ಮತ್ತು ಬೆಂಗಳೂರು ಪರಂಪರೆ ಉಳಿಸಿಕೊಳ್ಳಲು ಕಾರಣವಾಗಿರುವ ಹಲವು ಕಟ್ಟಡಗಳನ್ನು ತೆರವುಗೊಳಿಸಿ ಉಕ್ಕಿನ ಸೇತುವೆ ನಿರ್ಮಾಣದ ಅನಿವಾರ್ಯತೆ ಬಗ್ಗೆ ಮೂರು ತಿಂಗಳಿನಿಂದ ಮಾಹಿತಿ ಕೇಳಲಾಗುತ್ತಿದ್ದರೂ ಮಾಹಿತಿ ನೀಡದ ಹಿಂದಿರುವ ರಹಸ್ಯವೇನೆಂದು ಬೆಂಗಳೂರಿಗಳು ತಿಳಿಯಬೇಕಿದೆ.

ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವ ಯಾವುದೇ ಅಭಿವೃದ್ಧಿ ಯೋಜನೆಗಳ ಕುರಿತು ಸಾರ್ವಜನಿಕವಾದ ಚರ್ಚೆಗೆ ಅವಕಾಶವಿರಬೇಕು ಎಂದು ಸುಪ್ರೀಂಕೋರ್ಟ್‌ ಅನೇಕ ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಅಭಿವೃದ್ಧಿ ದೃಷ್ಟಿಯಿಂದ ಬೃಹತ್‌ ಯೋಜನೆಗಳ ಅನುಷ್ಠಾನಕ್ಕೂ ಮುನ್ನ ಯೋಜನೆಯ ಅವಶ್ಯಕತೆ ಮತ್ತು ಪ್ರಾಮುಖ್ಯತೆ ಹಾಗೂ ಪರಿಣಾ​ಮಗಳ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿ 812 ಮರಗಳನ್ನು ತೆರವುಗೊಳಿಸಬೇಕಿರುವ ಯೋಜನೆ ಕುರಿತು ನಾಗರಿಕರಿಂದ ಯಾವುದೇ ಅಭಿಪ್ರಾಯಗಳನ್ನು ಸಂಗ್ರಹಿಸಿಲ್ಲ. ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾಮಗಾರಿ ಹಂತಗಳಲ್ಲಿ ನಾಗರಿಕರ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿ ಉಂಟುಮಾಡುವ ಈ ಯೋಜನೆಯ ಅಂತಿಮ ನಿರ್ಣಯ ಕೈಗೊಳ್ಳುವ ವೇಳೆ ಯೋಜನೆ ಸಾಧಕ ಬಾಧಕಗಳ ಕುರಿತು ನಾಗರಿಕರು ಮಾತ್ರವಲ್ಲ ಸಂವಿಧಾನಬದ್ಧವಾಗಿ ರಚನೆ ಮಾಡಲಾಗಿರುವ ಮೆಟ್ರೋಪಾಲಿಟನ್‌ ಯೋಜನಾ ಸಮಿತಿಯ ಗಮನಕ್ಕೂ ತರಲಾಗಿಲ್ಲ. ಬೆಂಗಳೂರಿಗೆ ಈ ಮೊದಲು ತಯಾರು ಮಾಡಲಾಗಿದ್ದ ಮಾಸ್ಟರ್‌ಪ್ಲಾನ್‌ನ ಭಾಗವೂ ಅಲ್ಲದ ಈ ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಇದೀಗ ಅನಿವಾರ್ಯವಾಗಿದೆ. ಕಾನೂನಾತ್ಮಕವಾಗಿ ಯೋಜನೆಯ ಪರಿಶೀಲನೆಗೆ ಅವಕಾಶ ಒದಗಲಿದೆ ಎಂದು ಹೇಳಿದ್ದಾರೆ.

ಪೂರ್ಣಗೊಳ್ಳದ ಹಲವು ಯೋಜನೆಗಳಿಂದ ಬೆಂಗಳೂರಿಗರು ಸಾಕಷ್ಟುಅನಾನುಕೂಲತೆ ಎದುರಿಸಿದ್ದಾರೆ. ಪೂರ್ವ ಚಿಂತನೆ, ಸೂಕ್ತ ಸಿದ್ಧತೆ ಮಾಡದೇ ಅನುಷ್ಠಾನಗೊಳಿಸಲಾದ ಅಂಡರ್‌ಪಾಸ್‌, ಫ್ಲೈಓವರ್‌, ಸಿಗ್ನಲ್‌ ಫ್ರೀ ಕಾರಿಡಾರ್‌ಗಳು... ಹೀಗೆ ಎಲ್ಲೆಂದರಲ್ಲಿ ಯೋಜನೆಗಳು ತಲೆ ಎತ್ತಿ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ತೀರಾ ಹದಗೆಡುತ್ತಿರುವ ಸಂಚಾರ ವ್ಯವಸ್ಥೆ ಸರಿಪಡಿಸಲು ಸಮಗ್ರವಾದ ಯೋಜನೆ ರೂಪಿಸಿ ಬಳಿಕ ಮೆಟ್ರೋಪಾಲಿಟನ್‌ ಯೋಜನಾ ಸಮಿತಿ​ಯನ್ನೂ ಪರಿಗಣನೆಗೆ ತೆದುಕೊಂಡು, ಯೋಜನೆಗೆ ಸಾಕಷ್ಟುಪ್ರಚಾರವನ್ನೂ ನೀಡಿ ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಎಲ್ಲ ಪಾಲು​ದಾರರೊಂದಿಗೂ ಸಮಾಲೋಚಿಸಿ ಯೋಜನೆ ಅನುಷ್ಠಾನಗೊಳಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಶ್ರೀಧರ್‌ ಪಬ್ಬಿಸೆಟ್ಟಿಎಚ್ಚರಿಸುತ್ತಾರೆ. -ಕನ್ನಡಪ್ರಭ ವಾರ್ತೆ
(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌