
ಧಾರವಾಡ(ಅ.10): ಆತನೊಬ್ಬ ಸಾಮಾನ್ಯ ರೈತ. ತಾನಾಯ್ತು ತನ್ನ ಪಾಡಾಯ್ತು ಅಂತಾ ಇದ್ದವನು. ಆದರೆ ಹೆಸ್ಕಾಂ ಅಧಿಕಾರಿಗಳ ಲಂಚಬಾಕತನ ಆತನನ್ನು ಲೋಕಾಯುಕ್ತ ಠಾಣೆ ಮೆಟ್ಟಿಲೇರುವಂತೆ ಮಾಡಿತ್ತು. ಆದರೆ ಅದೇ ವಿಚಾರ ಆ ರೈತನ ಬದುಕಿಗೆ ಈಗ ಮುಳುವಾಗಿಬಿಟ್ಟಿದೆ. ಹೆಸ್ಕಾಂ ಅಧಿಕಾರಿಗಳ ಸೇಡಿನ ಕೆಲ್ಸ ಎಂತಹದ್ದು? ಇಲ್ಲಿದೆ ಡಿಟೇಲ್ಸ್
ಧಾರವಾಡ ತಾಲೂಕಿನ ಕುರಬಗಟ್ಟಿ ಗ್ರಾಮದ ವಿಠ್ಠಲ್ ವಕ್ಕುಂದ ತಾನಾಯಿತು ತನ್ನ ಕೃಷಿಯಾಯಿತು ಅಂತಾ ಜೀವನ ನಡೆಸುತ್ತಿದ್ದವರು. ಆದರೆ ಇವತ್ತು ಧಾರವಾಡದ ಹೆಸ್ಕಾಂ ಅಧಿಕಾರಿಗಳ ಸೇಡಿನ ವೃತ್ತಿಯಿಂದ ಈ ರೈತನ ಬದುಕು ಕತ್ತಲಾಗಿದೆ.
ಈ ಹಿಂದೆ ತನ್ನ ಜಮೀನಿಗೆ ವಿದ್ಯುತ್ ಸಂಪರ್ಕಕ್ಕಾಗಿ ಹೆಸ್ಕಾಂ ಅಧಿಕಾರಿಗಳ ಬಳಿ ಅಂಗಲಾಚಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಲೇ ಇಲ್ಲ. ಬೇಸತ್ತ ವಿಠ್ಠಲ್ ವಕ್ಕುಂದ ಲೋಕಾಯುಕ್ತರ ಮೊರೆ ಹೋಗಿದ್ದ. ಆ ವೇಳೆ ಹೆಸ್ಕಾಂ ಅಧಿಕಾರಿ ಸಾಲಿಮಠ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದ.. ಈ ಘಟನೆಯನ್ನೇ ಹಿಡಿದುಕೊಂಡು ಹೆಸ್ಕಾಂ ಅಧಿಕಾರಿಗಳು, ರೈತ ವಿಠ್ಠಲ್ ವಕ್ಕುಂದರ ಸಮಸ್ಯೆಗೆ ಸ್ಪಂದಿಸದೇ ಸೇಡಿಗೆ ಮುಂದಾಗಿದ್ದಾರಂತೆ.
ಸದ್ಯ ರೈತ ವಿಠ್ಠಲ್'ರವರ ಜಮೀನಿನ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದೆ. ಇನ್ನು ಮನೆಗೆ ಕಳೆದ ಮೂರು ತಿಂಗಳಿನಿಂದಲೂ ವಿದ್ಯುತ್ ಸಂಪರ್ಕ ಕೂಡ ತಪ್ಪಿ ಹೋಗಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಹೇಳಿದ್ರೂ ಪ್ರಯೋಜನವಾಗಿಲ್ಲ. ಹೆಸ್ಕಾಂನ ಎ.ಇ.ಇ. ಮಂಜುನಾಥ ಟಿಂಗರಿಕರ್ ಅವರನ್ನು ಕೇಳಿದರೆ, ಸಮಸ್ಯೆ ಇದ್ದರೆ ಬಗೆಹರಿಸುತ್ತೇವೆ ಅಂತಾರೆ.
ಮನೆ ವಿದ್ಯುತ್ ಸಂಪರ್ಕ ಕಡಿತವಾಗಿ 3 ತಿಂಗಳಾಗಿದ್ದರೂ, ಪ್ರತಿ ತಿಂಗಳೂ ವಿದ್ಯುತ್ ಬಿಲ್ ನೀಡೋದನ್ನ ಅಧಿಕಾರಿಗಳು ಮಾತ್ರ ಮರೆತಿಲ್ಲ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನೀಡಿದ ಮನವಿಗೆ ಮಾತ್ರ ಯಾರೂ ಸ್ಪಂದಿಸುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.