
ಪೆರು(ಸೆ.11): ಸಾಗರದಾಳ ಅದೊಂದು ವಿಸ್ಮಯಗಳ ಆಗರ. ಅದೊಂದು ವಿಸ್ಮಯ ಜೀವ ಜಗತ್ತನ್ನು ಸಲುಹುತ್ತಿರುವ ತಾಣ. ಮಾನವನಿಗೆ ಆಕಾಶದ ಮೇಲೆನಿದೆ ಎಂಬ ಕುತೂಹಲ ಎಷ್ಟಿದೆಯೋ ಅಷ್ಟೇ ಕುತೂಹಲ ಸಾಗರದ ಆಳದಲ್ಲೇನಿದೆ ಎಂಬುದರ ಕುರಿತೂ ಇದೆ. ಇದೇ ಕಾರಣಕ್ಕೆ ನೀರನ್ನು ಸೀಳಿ ಮತ್ತೆ ಮತ್ತೆ ಸಾಗರದ ತಳ ಮುಟ್ಟುವ ಪ್ರಯತ್ನ ಮಾಡುತ್ತಲೇ ಇದ್ದಾನೆ ಮಾನವ.
ಅದರಂತೆ ಪೆಸಿಫಿಕ್ ಮಹಾಸಾಗರದಲ್ಲಿ ಸಾಗರ ವಿಜ್ಞಾನಿಗಳು ಮೂರು ಹೊಸ ಮೀನಿನ ಪ್ರಭೇಧ ಕಂಡುಹಿಡಿದಿದ್ದಾರೆ. ಪೆರು ಮತ್ತಿ ಚಿಲಿ ದೇಶಗಳ ನಡುವಿನ ಅಟಕಾಮಾ ಪ್ರದೇಶದಲ್ಲಿ ಮೂರು ಹೊಸ ಪ್ರಭೇಧದ ಮೀನು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸ್ನೇಲ್ ಫಿಶ್(ಬಸವನ ಮೀನು)ಜಾತಿಗೆ ಸೇರಿದ ಈ ಮೀನುಗಳು, ಸಾಗರದಲ್ಲಿ ಸುಮಾರು 5 ಮೈಲುಗಳ ಆಳದಲ್ಲಿ ಪತ್ತೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ನ್ಯೂಕ್ಯಾಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಈ ಮೀನುಗಳು ಸಾಗರದಾಳದಲ್ಲಿ ಸುಮಾರು 21 ಸಾವಿರ ಅಡಿಗಳವರೆಗೂ ಬದುಕಬಲ್ಲವು ಎಂದು ತಿಳಿಸಿದ್ದಾರೆ. ಸದ್ಯ ಈ ಮೂರು ಪ್ರಭೇಧದ ಮೀನುಗಳಿಗೆ ಗುಲಾಬಿ, ನೀಲಿ ಮತ್ತು ನೇರಳೆ ಬಣ್ಣದ ಅಟಕಾಮಾ ಸ್ನೇಲ್ ಫಿಶ್ ಎಂಧು ಹೆಸರಿಸಲಾಗಿದ್ದು, ಇವುಗಳ ಕುರಿತು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.
ಈ ಹೊಸ ಪ್ರಭೇಧದ ಮೀನುಗಳ ಹಲ್ಲುಗಳು ಮತ್ತು ಕಿವಿಯೊಳಗಿನ ಮೂಳೆಗಳು ಇವುಗಳ ದೇಹ ರಚನೆಯಲ್ಲೇ ಅತ್ಯಂತ ಗಟ್ಟಿಯಾದ ಭಾಗ ಎಂದು ಗುರುತಿಸಲಾಗಿದ್ದು, ಇದರಿಂದ ಈ ಮೀನುಗಳು ಸಾಗರದಲ್ಲಿ ವೇಗವಾಗಿ ಚಲಿಸಬಲ್ಲವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸಾಗರದ ಅತ್ಯಂತ ಆಳದಲ್ಲಿ ಜೀವಿಸುವ ಈ ಮೀನುಗಳು, ಅಪರೂಪಕ್ಕೆ ಸಾಗರದ ಮೇಲ್ಮೆ ಭಾಗವನ್ನು ನೋಡುತ್ತವೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.