ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸಿಎಸ್'ಐಆರ್ ಹಿರಿಯ ವಿಜ್ಞಾನಿ ಸೆರೆ

By Suvarna Web DeskFirst Published Aug 20, 2017, 1:26 PM IST
Highlights

ಪಿಎಚ್‌ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕೇಂದ್ರ ಸರ್ಕಾರದ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೂ ಆಗಿರುವ ಅಧಿಕಾರಿಯೊಬ್ಬರನ್ನು ಶುಕ್ರವಾರ ರಾತ್ರಿ ಬಂಧಿಸಿದ ಮಾರತ್ತಹಳ್ಳಿ ಪೊಲೀಸರು, ಬಳಿಕ ಅವರನ್ನು ಠಾಣಾ ಜಾಮೀನು ಮೇರೆಗೆ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು(ಆ.20): ಪಿಎಚ್‌ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕೇಂದ್ರ ಸರ್ಕಾರದ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೂ ಆಗಿರುವ ಅಧಿಕಾರಿಯೊಬ್ಬರನ್ನು ಶುಕ್ರವಾರ ರಾತ್ರಿ ಬಂಧಿಸಿದ ಮಾರತ್ತಹಳ್ಳಿ ಪೊಲೀಸರು, ಬಳಿಕ ಅವರನ್ನು ಠಾಣಾ ಜಾಮೀನು ಮೇರೆಗೆ ಬಿಡುಗಡೆ ಮಾಡಿದ್ದಾರೆ.

ಮಾರತ್ತಹಳ್ಳಿ ಸಮೀಪದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರ (ಸಿಎಸ್‌ಐಆರ್)ದ ಸಮನ್ವಯಾಧಿಕಾರಿ ಹಾಗೂ ಹಿರಿಯ ವಿಜ್ಞಾನಿ ಇಮ್ತಿಯಾಜ್ ಮಹಮದ್ ಪರ್ವೇಜ್ ಅವರೇ ಲೈಂಗಿಕ ಕಿರುಕುಳ ವಿವಾದಕ್ಕೆ ಸಿಲುಕಿದ್ದು, ಅವರ ವಿರುದ್ಧ ಕೇರಳ ಮೂಲದ ನಾಲ್ವರು ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಘಟನೆ ಸಂಬಂಧ ರಾಜ್ಯ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ದೂರು ಕೊಟ್ಟಿದ್ದ ಸಂತ್ರಸ್ತೆಯರು, ಬಳಿಕ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರ ಸೂಚನೆ ಮೇರೆಗೆ ಶುಕ್ರವಾರ ಸಂಜೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನೂ ಭೇಟಿಯಾಗಿ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದರು. ಕೂಡಲೇ ವಿದ್ಯಾರ್ಥಿಗಳ ದೂರಿಗೆ ಸ್ಪಂದಿಸಿದ ಆಯುಕ್ತರು, ಈ ಬಗ್ಗೆ ಸೂಕ್ತ ತನಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಅವರಿಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

ಆನಂತರ ವಿದ್ಯಾರ್ಥಿನಿಯರ ದೂರಿನ ಮೇರೆಗೆ ಹಿರಿಯ ವಿಜ್ಞಾನಿ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ (354ಎ) ಪ್ರತ್ಯೇಕ ನಾಲ್ಕು ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ತಡ ರಾತ್ರಿ ಅವರನ್ನು ಬಂಧಿಸಿದ್ದರು. ಬಳಿಕ ಮುಂಜಾನೆ 4 ಗಂಟೆವರೆಗೆ ವಿಚಾರಣೆ ನಡೆಸಿ ಆರೋಪಿ ಹೇಳಿಕೆ ದಾಖಲಿಸಿಕೊಂಡ ತನಿಖಾಧಿಕಾರಿಗಳು, ಈ ರೀತಿ ದುಂಡಾವರ್ತನೆ ನಡೆಸದಂತೆ ಎಚ್ಚರಿಕೆ ಕೊಟ್ಟು ಠಾಣಾ ಜಾಮೀನು ಮಂಜೂರು ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಆರೋಪಿ ಮೇಲೆ ಕ್ರಮ:

ಸಿಎಸ್‌ಐಆರ್ ಕೇಂದ್ರದ ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಜೆ. ಅಲೆಕ್ಸಾಂಡರ್ ಮುಖಾಂತರ ನನ್ನನ್ನು ಸಂಪರ್ಕಿಸಿದ್ದರು. ಬಳಿಕ ಆ ವಿದ್ಯಾರ್ಥಿನಿಯರನ್ನು ಕಚೇರಿಗೆ ಕರೆಸಿಕೊಂಡು ಲಿಖಿತ ಹೇಳಿಕೆ ಬರೆಸಿಕೊಳ್ಳಲಾಯಿತು. ನಂತರ ಆ ಪ್ರತಿಯನ್ನು ಆಯುಕ್ತ ಸುನೀಲ್ ಕುಮಾರ್ ಅವರಿಗೆ ಕಳುಹಿಸಿದೆವು. ನಾಲ್ವರು ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ದೂರುಗಳನ್ನು ಸಲ್ಲಿಸಿದ್ದು, ಮಾರತ್ತಹಳ್ಳಿ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅ‘್ಯಕ್ಷ ವಿ.ಎಸ್. ಉಗ್ರಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

 

click me!