SC ST ಉಚಿತ ಬಸ್ ಪಾಸ್ ಯೋಜನೆ ಸ್ಥಗಿತ?

By Web DeskFirst Published Jun 6, 2019, 8:40 AM IST
Highlights

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಉಚಿತ ಬಸ್‌ ಪಾಸ್‌ ಯೋಜನೆಯನ್ನು ಸರ್ಕಾರ ಈ ಬಾರಿ ಕೈ ಬಿಡುವ ಸಾಧ್ಯತೆ ಇದೆ.

ಬೆಂಗಳೂರು :  ರಾಜ್ಯದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಉಚಿತ ಬಸ್‌ ಪಾಸ್‌ ಯೋಜನೆಯನ್ನು ಈ ಬಾರಿ ಕೈಬಿಡಲು ಸಮ್ಮಿಶ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಬಸ್‌ ಪಾಸ್‌ ವಿಚಾರ ಚರ್ಚೆಗೆ ಬಂದಿದೆ.

ಒಂದು ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವುದರಿಂದ ಉಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬೇಸರವಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ಭಾವನೆ ಮೂಡಿಸಿದಂತಾಗುತ್ತದೆ. ಇದು ವಿದ್ಯಾರ್ಥಿ ಹಂತದಲ್ಲೇ ಜಾತಿ ತಾರತಮ್ಯಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಉಚಿತ ಬಸ್‌ ಪಾಸ್‌ ಯೋಜನೆ ಕೈಬಿಡುವುದೇ ಲೇಸು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 2017-18ನೇ ಸಾಲಿನಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ನೀಡುವ ಯೋಜನೆ ಜಾರಿ ಮಾಡಿತ್ತು. ಇದರಿಂದ ಉಳಿದ ಸಮುದಾಯ ವಿದ್ಯಾರ್ಥಿಗಳು ಉಚಿತ ಬಸ್‌ ಪಾಸ್‌ಗೆ ಸರ್ಕಾರಕ್ಕೆ ಬೇಡಿಕೆ ಇರಿಸಿದ್ದರು. ಹಾಗಾಗಿ 2018-19ನೇ ಸಾಲಿನ ಬಜೆಟ್‌ನಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಬಳಿಕ ಆರ್ಥಿಕ ಹೊರೆ ಹೆಚ್ಚಾಗುವ ಕಾರಣ ಮುಂದಿಟ್ಟು ಸರ್ಕಾರ ಭರವಸೆ ಈಡೇರಿಸದೆ ಜಾರಿಕೊಂಡಿತ್ತು. ಪ್ರಸ್ತುತ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಬಸ್‌ ಪಾಸ್‌ಗೆ ಶೇ.50ರಷ್ಟುಹಣವನ್ನು ರಾಜ್ಯ ಸರ್ಕಾರ ಹಾಗೂ ಶೇ.25ರಷ್ಟುಹಣವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಶೇ.25ರಷ್ಟುಹಣವನ್ನು ನಿಗಮಗಳು ಭರಿಸುತ್ತಿವೆ.

click me!