
ನವದೆಹಲಿ(ಆ.3): ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಕಾಯ್ದೆ ಅಸಂವಿಧಾನಿಕ ಮತ್ತು ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಿಳೆ ಗಂಡಿನ ಸ್ವತ್ತು ಅಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ವೈವಾಹಿಕ ಬಂಧನದ ಪಾವಿತ್ರ್ಯತೆ ಕಾಪಾಡಲು ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಕಾನೂನು ಅಗತ್ಯ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿ ಹಾಕಿದೆ.
ಕೇಂದ್ರ ಸರ್ಕಾರದ ವಾದವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ. ಇದು ಹೆಣ್ಣಿನ ಮೇಲೆ ಗಂಡಿನ ದಬ್ಬಾಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟಿದೆ.
ವಿವಾಹಿತ ಪುರುಷನೊಬ್ಬ ಅವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಬಂಧ ಹೊಂದಿದರೆ ಅದರಲ್ಲಿ ಅಪರಾಧವೇನೂ ಇಲ್ಲ. ಆದರೆ ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ನಿಯಮ ಗಂಡು ಮತ್ತು ಹೆಣ್ಣನ್ನು ತಾರತಮ್ಯದಿಂದ ನೋಡುತ್ತದೆ ಎಂದು ಪೀಠ ಹೇಳಿದೆ.
ಕೇಂದ್ರದ ನಿಲುವು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದಿರುವ ಸುಪ್ರೀಂ, ಬೇರೆ ವ್ಯಕ್ತಿಯ ಜೊತೆಗೆ ಪತ್ನಿಯ ಲೈಂಗಿಕ ಸಂಬಂಧದ ಸ್ವರೂಪ ಏನು ಎಂಬುದು ಆಕೆಯ ಪತಿ ಅದಕ್ಕೆ ಒಪ್ಪಿಗೆ ಕೊಟ್ಟಿದ್ದಾನೋ ಅಥವಾ ಇಲ್ಲವೋ ಎಂಬುದನ್ನು ಅವಲಂಬಿಸಿದೆ. ಹೀಗಾಗಿ ಈ ಸೆಕ್ಷನ್ ಮಹಿಳೆಯನ್ನು ಗಂಡಿನ ಸೊತ್ತು ಎಂದು ಪರಿಗಣಿಸುತ್ತದೆ ಎಂದು ಹೇಳಿದೆ.
ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 497 ಪ್ರಶ್ನಿಸಿ ಜೋಸೆಫ್ ಸೈನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ, ವಿವಾಹೇತರ ಸಂಬಂಧವೇ ಮದುವೆ ಮುರಿದು ಬಿದ್ದಿದೆ ಎಂಬುದರ ಸೂಚನೆಯಾಗಿದ್ದು, ಮಹಿಳೆಗೆ ಲೈಂಗಿಕ ಸಂಪರ್ಕ ಬೇಡ ಎನ್ನುವುದರ ಜೊತೆಗೆ ಲೈಂಗಿಕ ಸ್ವಾಯತ್ತತೆಯೂ ಇದೆ ಎಂದು ಪೀಠ ಹೇಳಿದೆ. ಮದುವೆಯ ಕಾರಣಕ್ಕೆ ಮಹಿಳೆಯ ಲೈಂಗಿಕ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.