
ನವದೆಹಲಿ[ಏ.17]: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಸರ್ಕಾರಿ ನೌಕರರಿಗೆ ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡುವುದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮೀಸಲು ಬಡ್ತಿಗೆ ಸಂಬಂಧಿಸಿದಂತೆ ಪ್ರಮಾಣೀಕೃತ ಮಾಹಿತಿಯನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೋಮವಾರ ಈ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿದೆ.
‘ಈ ವಿಷಯವನ್ನು ಸುಪ್ರೀಂಕೋರ್ಟ್ ಇತ್ಯರ್ಥಪಡಿಸುವವರೆಗೆ ಎಸ್‌ಸಿ, ಎಸ್‌ಟಿ ನೌಕರರಿಗೆ ಮೀಸಲು ಆಧಾರದಲ್ಲಿ ಬಡ್ತಿ ನೀಡುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ನ ಎಸ್.ಎ.ಬೋಬ್ಡೆ ಮತ್ತು ಅಬ್ದುಲ್ ನಜೀರ್ ಅವರ ಪೀಠ ಸ್ಪಷ್ಟವಾಗಿ ಹೇಳಿದೆ.
ಮೀಸಲು ಬಡ್ತಿಯ ಮೂಲ ವಿವಾದ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿದೆ. ಸಂವಿಧಾನ ಪೀಠವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ‘ಹೇಗೆ ಇತರೆ ಹಿಂದುಳಿದ ವರ್ಗದವರಿಗೆ ಬಡ್ತಿಯಲ್ಲಿ ಮೀಸಲು ನೀಡುವಾಗ ಕೆನೆಪದರ ನೀತಿ ಅನ್ವಯಿಸಲಾಗುತ್ತದೆಯೋ ಹಾಗೆಯೇ ಎಸ್‌ಸಿ, ಎಸ್‌ಟಿಗಳ ಮೀಸಲು ಬಡ್ತಿಗೂ ಕೆನೆಪದರ ನೀತಿ ಅನ್ವಯಿಸಬೇಕು. ಇಲ್ಲದಿದ್ದರೆ ಈ ಎರಡು ಹಿಂದುಳಿದ ವರ್ಗದಲ್ಲಿರುವ ಶ್ರೀಮಂತರಿಗೆ ಮೀಸಲಿನ ಲಾಭ ದೊರಕಿಸಿಕೊಟ್ಟಂತಾಗುತ್ತದೆ’ ಎಂದು ಹೇಳಿತ್ತು. ನಂತರ ಈ ವಿಷಯಕ್ಕೆ ಸಂಬಂಧಪಟ್ಟಕೇಂದ್ರ, ರಾಜ್ಯ ಸರ್ಕಾರಗಳ ಹಾಗೂ ಖಾಸಗಿ ವ್ಯಕ್ತಿಗಳ 84 ಇತರೆ ಅರ್ಜಿಗಳನ್ನು ಇತ್ಯರ್ಥಪಡಿಸಲು ಸಾಮಾನ್ಯ ಪೀಠಕ್ಕೆ ಸೂಚಿಸಿತ್ತು.
ಈ ಮಧ್ಯೆ, ಮೀಸಲು ಬಡ್ತಿಗೆ ಸಂಬಂಧಪಟ್ಟಎರಡು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ನಲ್ಲೇ ವ್ಯತಿರಿಕ್ತ ಆದೇಶಗಳು ಬಂದಿದ್ದವು. ಒಂದು ಆದೇಶದಲ್ಲಿ ಸುಪ್ರೀಂಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲು ಬಡ್ತಿಗೆ ಸಂಬಂಧಿಸಿದ ಪ್ರಮಾಣೀಕೃತ ದತ್ತಾಂಶಗಳನ್ನು ಸಲ್ಲಿಸಲು ಸೂಚಿಸಿತ್ತು. ಮತ್ತೊಂದು ಆದೇಶದಲ್ಲಿ, ಈ ವಿಷಯ ಇತ್ಯರ್ಥವಾಗುವವರೆಗೆ ಹಿಂದಿನಂತೆ ಮೀಸಲು ಬಡ್ತಿ ನೀಡುವುದನ್ನು ಮುಂದುವರೆಸಲು ಹೇಳಿತ್ತು. ಹೀಗಾಗಿ ಗೊಂದಲ ಸೃಷ್ಟಿಯಾಗಿತ್ತು.
ಇದರ ನಡುವೆ, ದೆಹಲಿ ಹೈಕೋರ್ಟ್ ಮೀಸಲು ಬಡ್ತಿ ಮುಂದುವರೆಸುವ ಸುಪ್ರೀಂಕೋರ್ಟ್‌ನ ಆದೇಶವನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗಿತ್ತು. ಎಲ್ಲ ವಿಚಾರಗಳನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್, ಮುಂದಿನ ಆದೇಶ ನೀಡುವವರೆಗೆ ಬಡ್ತಿ ಮೀಸಲು ನೀಡುವಂತಿಲ್ಲ ಎಂದು ತಡೆಯಾಜ್ಞೆ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.