‘ಅಲ್ಪಸಂಖ್ಯಾತ’ ಪದ ಮರುವ್ಯಾಖ್ಯಾನ ಸಾಧ್ಯತೆ?

By Web DeskFirst Published Feb 12, 2019, 11:52 AM IST
Highlights

‘ಅಲ್ಪಸಂಖ್ಯಾತ’ ಪದ ಮರುವ್ಯಾಖ್ಯಾನ: 3 ತಿಂಗಳಲ್ಲಿ ನಿರ್ಧಾರಕ್ಕೆ ಆದೇಶ| ಅಲ್ಪಸಂಖ್ಯಾತ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ| ದೇಶದ ಜನಸಂಖ್ಯೆ ಬದಲು ರಾಜ್ಯವಾರು ಜನಸಂಖ್ಯೆ ಪರಿಗಣಿಸಿ: ಅರ್ಜಿ

ನವದೆಹಲಿ[ಫೆ.12]: ‘ಅಲ್ಪಸಂಖ್ಯಾತರು’ ಎಂಬ ಪದವನ್ನು ಮರುವ್ಯಾಖ್ಯಾನಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ 3 ತಿಂಗಳ ಒಳಗೆ ಒಂದು ತೀರ್ಮಾನಕ್ಕೆ ಬರಬೇಕು ಎಂದು ಸರ್ವೋಚ್ಚ ನ್ಯಾಯಾಯಲವು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಸೂಚಿಸಿದೆ.

‘ಅಲ್ಪಸಂಖ್ಯಾತರು’ ಎಂಬುದು ಈಗ ರಾಷ್ಟ್ರಮಟ್ಟದ ಜನಸಂಖ್ಯೆ ಆಧರಿಸಿ ಏಕರೂಪದಲ್ಲಿ ಅನ್ವಯವಾಗುತ್ತದೆ. ಆದರೆ ಬಿಜೆಪಿ ಮುಖಂಡ ಅಶ್ವನಿಕುಮಾರ್‌ ಉಪಾಧ್ಯಾಯ ಎಂಬುವರು ಇದರ ವಿರುದ್ಧ ಅರ್ಜಿ ಸಲ್ಲಿಸಿದ್ದು, ‘ಆಯಾ ರಾಜ್ಯವಾರು ಜನಸಂಖ್ಯೆ ಆಧರಿಸಿ ಅಲ್ಪಸಂಖ್ಯಾತರು ಯಾರು ಎಂಬುದನ್ನು ನಿರ್ಧರಿಸಬೇಕು. ರಾಷ್ಟ್ರಮಟ್ಟದ ಜನಸಂಖ್ಯೆ ನೋಡಿಕೊಂಡು ಕೆಲವು ನಿರ್ದಿಷ್ಟಕೋಮುಗಳನ್ನು ಮಾತ್ರ ‘ಅಲ್ಪಸಂಖ್ಯಾತರು’ ಎಂದು ಏಕರೂಪದಲ್ಲಿ ನಿರ್ಧರಿಸುವುದು ತಪ್ಪು’ ಎಂದು ವಾದಿಸಿದ್ದರು.

ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಜನಸಂಖ್ಯಾವಾರು ಪರಿಗಣಿಸಿದರೆ ಹಿಂದೂಗಳೇ ನಿಜವಾದ ಅಲ್ಪಸಂಖ್ಯಾತರು. ಆದರೆ ಅವರಿಗೆ ಅಧಿಕೃತವಾಗಿ ಅಲ್ಪಸಂಖ್ಯಾತ ಸ್ಥಾನಮಾನವಿಲ್ಲ. ಈ ರಾಜ್ಯಗಳಲ್ಲಿ ಮುಸ್ಲಿಮರು ಅಥವಾ ಕ್ರೈಸ್ತರು ಬಹುಸಂಖ್ಯಾತರಾಗಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದ್ದರೂ ಅಲ್ಪಸಂಖ್ಯಾತ ಸ್ಥಾನಮಾನದಿಂದ ವಂಚಿತರಾಗುತ್ತಿದ್ದಾರೆ ಎಂದು ಉಪಾಧ್ಯಾಯ ಅವರ ವಾದ.

ಇದನ್ನು ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್‌ ಗೊಗೋಯ್‌, ‘3 ತಿಂಗಳ ಒಳಗೆ ಈ ಬಗ್ಗೆ ಒಂದು ತೀರ್ಮಾನ ಮಾಡಿ, ನಮಗೆ ತಿಳಿಸಿ’ ಎಂದು ಅಲ್ಪಸಂಖ್ಯಾತ ಆಯೋಗಕ್ಕೆ ಸೂಚಿಸಿತು.

ಹಿಂದೂಗಳ ಸಂಖ್ಯೆ ಎಲ್ಲಿ ಕಡಿಮೆ?

ಲಕ್ಷದ್ವೀಪ 2.5%

ಮಿಜೋರಂ 2.75%

ನಾಗಾಲ್ಯಾಂಡ್‌ 8.75%

ಮೇಘಾಲಯ 11.53%

ಜಮ್ಮು-ಕಾಶ್ಮೀರ 28.44%

ಅರುಣಾಚಲ ಪ್ರದೇಶ 29%

ಮಣಿಪುರ 31.31%

ಪಂಜಾಬ್‌ 38.40%

click me!