
ತಿರುವನಂತಪುರ: ವಾರ್ಷಿಕ ಯಾತ್ರೆಯ ಬಳಿಕ ಮುಚ್ಚಲ್ಪಟ್ಟಿದ್ದ ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲನ್ನು ಫೆ.12 ರಂದು ತೆರೆಯಲಾಗುತ್ತಿದೆ. ಮಾಸಿಕ ಪೂಜೆಯ ನಿಮಿತ್ತ ಐದು ದಿನಗಳ ಕಾಲ ಅಯ್ಯಪ್ಪನಿಗೆ ವಿವಿಧ ಸೇವೆಗಳನ್ನು ನೆರವೇರಿಸಲಾಗುತ್ತದೆ. ಆದರೆ ಈ ಬಾರಿಯೂ ಮಹಿಳೆಯರು ದರ್ಶನಕ್ಕೆ ಬರಬಹುದು, ಅದನ್ನು ಬಿಜೆಪಿ ಹಾಗೂ ಸಂಘಪರಿವಾರ ವಿರೋಧಿಸಿ ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ಶಬರಿಮಲೆಯಲ್ಲಿ ತಳಮಳದ ವಾತಾವರಣ ಸೃಷ್ಟಿಯಾಗಿದೆ.
ಮಲಯಾಳ ಮಾಸವಾದ ಕುಂಬಮ್ ನಿಮಿತ್ತ ಫೆ.17ರವರೆಗೂ ಅಯ್ಯಪ್ಪ ದೇಗುಲವನ್ನು ತೆರೆದಿರಲಾಗುತ್ತದೆ. ಐದು ದಿನಗಳ ಕಾಲ ಕಲಭಾಭಿಷೇಕಂ, ಸಹಸ್ರಕಳಸಂ ಹಾಗೂ ಲಕ್ಷಾರ್ಚನೆಗಳನ್ನು ನೆರವೇರಿಸಲಾಗುತ್ತದೆ. ಮಂಗಳವಾರ ಸಂಜೆ ಮುಖ್ಯ ಅರ್ಚಕ ವಾಸುದೇವನ್ ನಂಬೂದರಿ ಅವರು ದೇಗುಲದ ಬಾಗಿಲು ತೆರೆದು ಪೂಜೆ ಆರಂಭಿಸಲಿದ್ದಾರೆ. ಬುಧವಾರ ಬೆಳಗ್ಗೆ 10ರಿಂದ ಶಬರಿಮಲೆಗೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಅಹಿತಕರ ಘಟನೆ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಶಬರಿಮಲೆಯ ಬುಡದಲ್ಲಿರುವ ನೀಲಕ್ಕಲ್‌ನಲ್ಲಿ ಹಲವಾರು ನಿರ್ಬಂಧಗಳನ್ನು ಈಗಾಗಲೇ ಹೇರಲಾಗಿದೆ.
ಎರಡು ತಿಂಗಳ ಕಾಲ ನಡೆದ ವಾರ್ಷಿಕ ಯಾತ್ರೆ ಜ.20ರಂದು ಮುಕ್ತಾಯಗೊಂಡಿತ್ತು. ಯಾತ್ರೆ ಸಂದರ್ಭದಲ್ಲಿ 51 ಮಹಿಳೆಯರು ದೇಗುಲ ಪ್ರವೇಶಿಸಿದ್ದರು ಎಂದು ಹೇಳಿದ್ದ ಸರ್ಕಾರ ಬಳಿಕ ಉಲ್ಟಾಹೊಡೆದು ಕೇವಲ ಇಬ್ಬರು ಮಹಿಳೆಯರು ಮಾತ್ರವೇ ಅಯ್ಯಪ್ಪ ದರ್ಶನ ಪಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ